ಉಡುಪಿ : ಲಿಂಗತ್ವ ಅಲ್ಪಸಂಖ್ಯಾತರಿಗೆ ಭೂಮಿಯ ಹಕ್ಕು ನೀಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲೇ ಇನ್ನೊಂದು ಪ್ರಥಮವನ್ನು ಸಾಧಿಸಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು.
ಅವರಿಂದು ಉಡುಪಿ ಪ್ರವಾಸ ಬಂಗಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೂವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಹಕ್ಕುಪತ್ರ ವಿತರಿಸಿದ ಸಚಿವರು, ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆ ಕಟ್ಟಲು 1,20,000 ರೂ.ಸಹಾಯಧನ ಒದಗಿಸಲಾಗುವುದು ಎಂದು ಸಚಿವರು ನುಡಿದರು.
ಸಮಾಜದಲ್ಲಿ ಶೋಷಣೆಗೆ ಒಳಗಾದವರು, ಹಿಂದುಳಿದವರ ಅಭಿವೃದ್ಧಿಯೇ ಸರ್ಕಾರದ ಆದ್ಯತೆಯಾಗಿದ್ದು, ನಮ್ಮ ಜಿಲ್ಲೆ ಸಾಮಾಜಿಕ ನ್ಯಾಯ ನೀಡುವಲ್ಲಿ ಮುಂದಿದೆ ಎಂದರು.
ಚಾಂತಾರುವಿನ ಹೇರೂರು ಗ್ರಾಮದ ಸರ್ಕಾರಿ ಭೂಮಿಯಲ್ಲಿ ಉತ್ತಮ ಭೂಮಿಯನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ. ಇದರ ಸದ್ಬಳಕೆಯನ್ನು ಮಾಡಿ ಎಂದು ಫಲಾನುಭವಿಗಳಿಗೆ ಸಚಿವರು ಶುಭ ಹಾರೈಸಿದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸಮಾರಂಭದಲ್ಲಿದ್ದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ರವಿರಾಜ್ ಹೆಗಡೆ, ತಹಸೀಲ್ದಾರ್ ಗುರುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗ್ರೇಸಿ ಗೊನ್ಸಾಲಿಸ್, ರಾಜೇಂದ್ರ ಬೇಕಲ್, ಚಾಂತಾರು ಪಿಡಿಒ ಸುರೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಹರೀಶ್ ಗಾಂವ್ಕರ್ ಉಪಸ್ಥಿತರಿದ್ದರು.
ಸಂಗೀತ ಪರಿಕರ ವಿತರಣೆ
ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ 8 ಫಲಾನುಭವಿಗಳಿಗೆ 40,000 ರೂ. ವರೆಗಿನ ಮೌಲ್ಯದ ಸಂಗೀತೋಪಕರಣಗಳನ್ನು ವಿತರಿಸಲಾಯಿತು. ಇವರಲ್ಲಿ 7 ಪರಿಶಿಷ್ಟ ಜಾತಿ ಮತ್ತು ಒಬ್ಬ ಪರಿಶಿಷ್ಟ ಪಂಗಡದವರಿಗೆ ಸಂಗೀತೋಪಕರಣಗಳನ್ನು ಇಲಾಖೆ ವತಿಯಿಂದ ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು.