ಉಡುಪಿ: ಎಲ್ಲಾ ಸೇವೆಗಳಲ್ಲಿ ವೈದ್ಯಕೀಯ ಸೇವೆ ಶ್ರೇಷ್ಠ ಸೇವೆಯಾಗಿದೆ. ಈ ಸೇವೆಯಲ್ಲಿ ಸೇವೆ ದುರುಪಯೋಗವಾಗಲು ಸಾಧ್ಯವಿಲ್ಲ. ಅಗತ್ಯವಿದ್ದವರು ಮಾತ್ರ ವೈದ್ಯಕೀಯ ಸೇವೆಯ ಮೊರೆ ಹೊಗುತ್ತಾರೆ. ಕಷ್ಟದಲ್ಲಿರುವವರಿಗೆ ಮಾಡುವ ಸೇವೆ ಭಗವಂತನಿಗೆ ಸಲ್ಲುತ್ತದೆ ಎಂದು ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಗಾಂಧಿ ಆಸ್ಪತ್ರೆಯ ವಿಶಂತಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಸೇವೆಯಲ್ಲಿ ಅಲೋಪತಿ, ಹೋಮಿಯೋಪತಿ ಮೊದಾಲಾದ ಹಲವಾರು ವಿಧಾನಗಳಿವೆ. ಆದರೆ ಎಲ್ಲವುಗಳಿಗಿಂತ `ಸಿಂಪಥಿ’ಯೇ ಮುಖ್ಯವಾಗಿದೆ. ರೋಗಿಗಳ ಮೇಲೆ ಸಿಂಪಥಿ ಇಟ್ಟುಕೊಂಡು ಸೇವೆ ಮಾಡುವುದು ಮುಖ್ಯವಾಗಿದೆ. ಆಸ್ಪತ್ರೆ ಅಭಿವೃದ್ದಿಯಾಗಲಿ ಎಂದು ಹಾರೈಸುವುದು ಎಂದರೆ ರೋಗಿಗಳ ಸಂಖ್ಯೆ ಹೆಚ್ಚಾಗಲಿ ಎಂದರ್ಥವಲ್ಲ. ರೋಗಿಗಳಿಗೆ ಉತ್ತಮ ಸೇವೆ ಸಿಗಲಿ ಎಂದು ಅರ್ಥ ಎಂದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿಯಂತಹ ಸಣ್ಣ ನಗರದಲ್ಲಿ ಆಸ್ಪತ್ರೆಯೊಂದು 20 ವರ್ಷ ಸೇವೆ ಮಾಡುವುದೆಂದರೆ ದಾಖಲೆಯೇ ಸರಿ ಎಂದರು.
ಕನರ್ಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಪಿ. ಜಯರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ನಗರರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ, ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮ್ ಆಚಾರ್ಯ, ದೊಡ್ಡಣ ಗುಡ್ಡೆಯ ಎ.ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಕನರ್ಾಟಕ ರಾಜ್ಯ ಹಣಕಾಸು ನಿಗಮದ ನಿವೃತ್ತ ಎಜಿಎಂ ವೈ ಮೋಹನ್ ದಾಸ್ ಭಟ್, ಲಕ್ಷ್ಮೀ ಹರೀಶ್ಚಂದ್ರ, ಪಂಚಮಿ ಉಪಸ್ಥಿತರಿದ್ದರು.
ಇದಕ್ಕೆ ಮೊದಲು ಬೆಳಿಗ್ಗೆ ಆಸ್ಪತ್ರೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಣಿಪಾಲ ಕೆಎಂಸಿ ಪ್ರಸೂತಿಕ ಆ ತಜ್ಞ ಡಾ ಪ್ರತಾಪ್ ಕುಮಾರ್ ಆಸ್ಪತ್ರೆಯ ನವೀಕೃತ ಹೆರಿಗೆ ವಾರ್ಡನ್ನು ಉದ್ಘಾಟಿಸಿದರು. ಈ ವೇಳೆ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ ಜಿ ಶಂಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಯು. ಆರ್. ಸಭಾಪತಿ, ಓಕುಡೆ ಡಯಾಗ್ನಾಸಿಸ್ ಸೆಂಟರ್ನ ಡಾ. ಅಶೋಕಕುಮಾರ್ ವೈ. ಜಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್, ಐಎಂಎ ಉಡುಪಿ ಘಟಕಾಧ್ಯಕ್ಷ ಡಾ. ಸಂದೀಪ ಶೆಣೈ, ಜಿಲ್ಲಾಸ್ಪತ್ರೆ ರಕ್ತನಿಧಿಯ ಡಾ. ವೀಣಾ ಇದ್ದರು.
ಗಾಂಧಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹರಿಶ್ಚಂದ್ರ ಸ್ವಾಗತಿಸಿದರು. ಲಕ್ಷ್ಮೀ ಹರಿಶ್ಚಂದ್ರ ಮತ್ತು ಪಂಚಮಿ ಸಹಕರಿಸಿದರು. ಡಾ. ವ್ಯಾಸರಾಜ ತಂತ್ರಿ ವಂದಿಸಿದರು. ಡಾ. ಪ್ರಶಾಂತ ನಿಂಜೂರು ನಿರೂಪಿಸಿದರು. ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ 142 ಯೂನಿಟ್ ರಕ್ತ ಸಂಗ್ರಹಿಸಲಾಯಿತು.