ಉಡುಪಿ-ಶಿವಮೊಗ್ಗ ಮಾರ್ಗದಲ್ಲಿ ನರ್ಮ್ ಬಸ್ಸುಗಳಿಗೆ ಪ್ರಮೋದ್ ಮಧ್ವರಾಜ್ ಹಸಿರು ನಿಶಾನೆ
ಉಡುಪಿ : ಉಡುಪಿಯ ಬನ್ನಂಜೆಯಲ್ಲಿ 30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಿಸಲು ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿ- ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ನರ್ಮ್ ಬಸ್ ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ನರ್ಮ್ ಬಸ್ ಸಂಚಾರಕ್ಕೆ 55 ಪರ್ಮಿಟ್ ಗಳು ಮಂಜೂರಾಗಿದ್ದು, ಪ್ರಸ್ತುತ 39 ಬಸ್ ಗಳು ಬಂದಿವೆ , ಜಿಲ್ಲೆಯಲ್ಲಿ ಖಾಸಗಿ ಬಸ್ ಸೌಲಭ್ಯ ಇಲ್ಲದ ಕಡೆಗಳಲ್ಲಿ, ಒತ್ತಡ ಅಧಿಕವಾಗಿರುವ ಪ್ರದೇಶದಲ್ಲಿ ಹಾಗೂ ಜನರ ಬೇಡಿಕೆಗೆ ಇರುವ ಮಾರ್ಗದಲ್ಲಿ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ, ಹಿರಿಯ ನಾಗರೀಕರು ಮತ್ತು ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಪ್ರಯಾಣ ಸೌಲಭ್ಯ ದೊರಕುತ್ತಿದೆ,ಜಿಲ್ಲೆಗೆ ಇನ್ನೂ 20 ಬಸ್ ಗಳು ಬರಲಿವೆ ಎಂದು ಸಚಿವರು ಹೇಳಿದರು.
ಉಡುಪಿಯ ಹಳೆಯ ಡಿಡಿಪಿಐ ಕಚೇರಿ ಪ್ರದೇಶದಲ್ಲಿ 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನರ್ಮ್ ಬಸ್ ನಿಲ್ದಾಣನಿರ್ಮಾಣಕ್ಕೆ ಈಗಾಗಲೇ ಟೆಂಢರ್ ಅಗಿದೆ, ಡೆಲ್ಟಾ ಯೋಜನೆ ಮತ್ತು ನಗರೋತ್ಥಾನ ಯೋಜನೆಯಡಿಯಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣ, ಮಲ್ಪೆ ಬಸ್ ನಿಲ್ದಾಣ ಮತ್ತು ಮಣಿಪಾಲ ಬಸ್ ನಿಲ್ದಾಣಗಳನ್ನು ಹೈಟೆಕ್ ಆಗಿ ರೂಪುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಉಡುಪಿ ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಬಸ್ಗಳಿಗೆ ಉಡುಪಿಯಲ್ಲಿಯೇ ಪರ್ಮಿಟ್ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ನಾಯಕರಾದ ಜನಾರ್ಧನ ಭಂಡಾರ್ಕರ್, ಚಂದ್ರಿಕಾ ಶೆಟ್ಟಿ, ವೆರೋನಿಕಾ ಕರ್ನೆಲಿಯೊ, ಮೈರ್ಮಾಡಿ ಸುಧಾಕರ್ ಶೆಟ್ಟಿ, ಡಾ ಸುನಿತಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.