Home Mangalorean News Kannada News ಉಡುಪಿ: ಶೋಭಾ ಕರಂದ್ಲಾಜೆಯವರು ಕತ್ತಲಲ್ಲಿ ಸಂಚರಿಸಿದರೆ ರಾಜ್ಯ ಸರಕಾರದ ಸಾಧನೆ ಕಾಣಸಿಗದು : ಕಾಂಗ್ರೆಸ್

ಉಡುಪಿ: ಶೋಭಾ ಕರಂದ್ಲಾಜೆಯವರು ಕತ್ತಲಲ್ಲಿ ಸಂಚರಿಸಿದರೆ ರಾಜ್ಯ ಸರಕಾರದ ಸಾಧನೆ ಕಾಣಸಿಗದು : ಕಾಂಗ್ರೆಸ್

Spread the love

ಉಡುಪಿ: ಜಾಣ ಕುರುಡು ಪ್ರದರ್ಶಿಸುವವರಿಗೆ ಸರಕಾರದ ಯಾವುದೇ ಸಾಧನೆಗಳು ಕಾಣಸಿಗದು. ಕೆಲವರು ದೂಷಣೆಯನ್ನೇ ಅಭಿವೃದ್ಧಿ, ಸಾಧನೆ ಎಂದು ಬಿಂಬಿಸಲು ಹೊರಟಂತಿದೆ. ‘ಶೂನ್ಯ ಸಾಧನೆಯ ರಾಜ್ಯ ಕಾಂಗ್ರೆಸ್ ಸರಕಾರ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ’ ಹೇಳಿಕೆಗೆ  ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಬಿಜೆಪಿ ಆಡಳಿತಾವಧಿಯಲ್ಲಿ ನಿಷ್ಕ್ರಿಯಗೊಂಡಿದ್ದ ಪಡಿತರ ಚೀಟಿ ವಿತರಣೆ, ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪೂರಕವಾಗಿ ಬಿಪಿಎಲ್ ಕಾರ್ಡ್‍ದಾರರಿಗೆ ಅಕ್ಕಿ ವಿತರಣೆ, ಒಂದು ಕೋಟಿ ನಾಲ್ಕು ಲಕ್ಷ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಡಗೊಳ್ಳಲು ಹಾಲಿನ ವಿತರಣೆ, 91/ಸಿ ಅಡಿಯಲ್ಲಿ ನಿವೇಶನರಹಿತರಿಗೆ ಸರಕಾರಿ ಜಾಗದಲ್ಲಿ ಹಕ್ಕುಪತ್ರ ವಿತರಣೆ, ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 20 ಕೋಟಿ ವಿನಿಯೋಗ, ಕಂದಾಯ ಅದಾಲತ್, 50 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ, ಉದ್ಯೋಗ ಖಾತ್ರಿ ಯೋಜನೆ, ತೋಟಗಾರಿಕಾ ಮಿಷನ್, ಸರ್ವ ಶಿಕ್ಷಣ ಅಭಿಯಾನ, ಆರೋಗ್ಯ ಅಭಿಯಾನ, ನಿರ್ಮಲ ಗ್ರಾಮ ಯೋಜನೆ, ಇಂದಿರಾ ಆವಾಸ್ ಯೋಜನೆ, ಹಾಗೆಯೇ ಪಂಚಾಯತ್ ರಾಜ್ ವ್ಯವಸ್ಥೆಯ ವಿಕೇಂದ್ರೀಕರಣಕ್ಕಾಗಿ ಸರಕಾರ ಶ್ರಮಿಸುವುದರೊಂದಿಗೆ ಅಧ್ಯಕ್ಷರ ಅವಧಿ 5 ವರ್ಷಗಳಿಗೆ ಹೆಚ್ಚಿಸಿರುವುದು ಮತ್ತು 50 ಶೇಕಡಾ ಮಹಿಳಾ ಮೀಸಲಾತಿ ಒದಗಿಸಿರುವುದು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಅವಕಾಶ ಒದಗಿದಂತೆ. ಇವುಗಳು ರಾಜ್ಯ ಸರಕಾರದ ಸಾಧನೆಗಳಾಗಿವೆ. ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಹಗರಣಗಳ ಸರಮಾಲೆಯನ್ನೇ ಜನ ಕಂಡಿದ್ದಾರೆ. ಆ ಅವಧಿಯಲ್ಲಿ ಶೋಭಾರವರು ಮಂತ್ರಿಗಳಾಗಿ ವಿಜೃಂಭಿಸಿದವರು.

ಸಿದ್ಧರಾಮಯ್ಯನವರ ಈ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ರಾಜ್ಯದ ಅನ್ನಭಾಗ್ಯದ ಅಕ್ಕಿ ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಹೋಗುತ್ತದೆ ಎಂಬ ಸ್ಪಷ್ಟ ಅರಿವು ಶೋಭಾರವರಿಗೆ ಇದ್ದಲ್ಲಿ, ಅಧಿಕಾರಿಗಳಿಗೆ ಮಾಹಿತಿ ಒದಗಿಸಿ ಸೂಕ್ತ ಕ್ರಮ ಜರಗಿಸಬಾರದೇಕೆ? ಸರಿಯಾದ ದಾಖಲೆಗಳನ್ನು ಹೊಂದಿದವರಿಗೆ ಸರಕಾರ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸುತ್ತದೆ. ದಾಖಲೆ ರಹಿತರಿಗೆ ಸರಕಾರವು ಬಾಂಡ್‍ಗಳ ವಿತರಣೆ ಅಸಾಧ್ಯ. ಇದರ ಅರಿವು ಹೊಂದಿಯೂ ಶೋಭಾರವರು ಯೋಜನೆಗಳನ್ನು ನಿಲ್ಲಿಸಲು ಸರಕಾರ ಪ್ರಯತ್ನಿಸುತ್ತಿದೆ ಎನ್ನುವ ಹೇಳಿಕೆ ಅವರಲ್ಲಿಯ ಮಾಹಿತಿ ಕೊರತೆ ಕಾರಣ. ಶೋಭಾ ಕರಂದ್ಲಾಜೆಯವರು ರಾಜ್ಯ ಸರಕಾರವನ್ನು ನಿರಂತರವಾಗಿ ದೂಷಿಸುವ ಬದಲು ಅತ್ಯಾಚಾರ, ಅನಾಚಾರ, ಭೃಷ್ಟಾಚಾರ ಹೀಗೆ ಹಗರಣಗಳೊಂದಿಗೆ ಆಡಳಿತ ನಡೆಸಿ ಜನತೆಯಿಂದ ತಿರಸ್ಕರಿಸಲ್ಪಟ್ಟ ಬಿಜೆಪಿಯ ಸ್ಥಿತಿ ಈಗ ರಾಜ್ಯದಲ್ಲಿ ಏನಾಗಿದೆ ಎಂಬುವುದನ್ನು ಅರಿತುಕೊಳ್ಳಲು ಪ್ರಯತ್ನಿಸಲಿ.

ಸಂಸತ್ ಸದಸ್ಯೆಯಾಗಿ ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಹಾಗೂ ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳಡಿ ರಾಜ್ಯ ಸರಕಾರಕ್ಕೆ ಬರಬೇಕಾಗಿರುವ ಅನುದಾನವನ್ನು ಪಡೆಯುವುದರ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು, ಇನ್ನೂ ಶಾಸಕಿ ಗುಂಗಿನಿಂದ ಹೊರಬಾರದೇ ಇರುವುದು ಅವರ ಮಾನಸಿಕ ತಳಮಳವನ್ನು ಬಿಂಬಿಸುತ್ತದೆ.

ಕೇಂದ್ರವು ರಾಜ್ಯ ಸರಕಾರದಿಂದ ಪಡೆಯುತ್ತಿರುವ ತೆರಿಗೆ ಪ್ರಮಾಣದ ಏರಿಕೆಯನ್ನು ಮರೆಮಾಚಿ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚುವರಿ ಅನುದಾನ ಬಂದಿದೆ ಎನ್ನುವ ಸಂಸತ್ ಸದಸ್ಯರ ಹೇಳಿಕೆ ಜನತೆಯನ್ನು ತಪ್ಪುದಾರಿಗೆ ಎಳೆಯುವ ಹುನ್ನಾರ. ಕಾಂಗ್ರೆಸ್ ಯಾವಾಗಲೂ ಜನಪರ, ಅಭಿವೃದ್ಧಿ ಪರ, ಹಿಂದುಳಿದ ವರ್ಗಗಳ ಪರ ಯೋಜನೆಗಳಿಗೆ ಬೆಂಬಲ ನೀಡುವ ಪಕ್ಷವಾಗಿದೆ. ಇದನ್ನು ಅರಿತೇ ಕರ್ನಾಟಕದ ಜನತೆ ಬಿಜೆಪಿ ಸರಕಾರವನ್ನು ಒಂದೇ ಅವಧಿಗೆ ಮೊಟಕುಗೊಳಿಸಿ ಕಾಂಗ್ರೆಸ್‍ಗೆ ಬಹುಮತದ ಅಧಿಕಾರವನ್ನು ನೀಡಿದ್ದನ್ನು ಶೋಭಾ ಕರಂದ್ಲಾಜೆಯವರು ಅರಿಯಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ. ನರಸಿಂಹಮೂರ್ತಿ, ಕಿಷನ್ ಹೆಗ್ಡೆ ಕೊಳ್ಕೆಬೈಲ್, ಗ್ರಾಮ ಪಂಚಾಯತ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಉಡುಪಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version