ಉಡುಪಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸಂಕೀರ್ಣ – ದುಬೈಯ “ಧರ್ಮ ಕ್ಷೇತ್ರ”
ಉಡುಪಿ: ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ ಎಂದ ಶ್ರೀಕೃಷ್ಣ ಪರಮಾತ್ಮನಿಗೆ ಪ್ರಿಯವಾದ ನಾಟ್ಯಸೇವೆಯ ಮೂಲಕ ಜುಲೈ 29ರ ಸಂಜೆ ಉಡುಪಿಯ ರಾಜಾಂಗಣದಲ್ಲಿ ಸಂಕೀರ್ಣ ನೃತ್ಯಶಾಲೆ – ದುಬೈ ಯ ಗುರು ಶಿಷ್ಯರು ಜನ ಮನ ಗೆದ್ದರು.
ಉಡುಪಿ ಪರ್ಯಾಯ ಪೀಠದ ಶ್ರೀ ಪಲಿಮಾರು ಶ್ರೀಗಳು ಹಾಗು ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಪುಷ್ಪಾoಜಲಿ, ಗಣಪತಿ ವಂದನೆ ಮೂಲಕ ಕಾರ್ಯಕ್ರಮ ಆರಂಭಿಸಿದರೆ, ದಶಾವತಾರದ ಮೂಲಕ ನಾಟ್ಯ ದೃಶ್ಯದೌತಣ ನೀಡಿದರು. ಸಂಕೀರ್ಣದ ಪ್ರತಿಭಾನ್ವಿತ ಕಿರಿಯ ವಿದ್ಯಾರ್ಥಿನಿಯರು ವಿಷಮಕಾರಿ ಕಣ್ಣನ್ ಆಗಿ ಬಾಲಕೃಷ್ಣನ ಚೆಲ್ಲಾಟದ ಮೂಲಕ ಪ್ರೇಕ್ಷಕರಲ್ಲಿ ಮಂದಹಾಸ ಮೂಡಿಸಿದರು.
ಪಿಳ್ಳಂಗೋವಿಯ ಚೆಲುವ ಕೃಷ್ಣನ, ಗೋವಿಂದ ನಿನ್ನ ನಾಮವೇ ಚೆಂದ ಮೂಲಕ ಶಿಷ್ಯವೃಂದವು ಕೃಷ್ಣನನ್ನು ನಾಟ್ಯ ವೈಭವದಿಂದ ಮೆರೆಸಿದರೆ ,ಸ್ವತಃ ಗುರು ಸಪ್ನಾ ಕಿರಣ್ ರವರು ಬಾರೋ ಕೃಷ್ಣಯ್ಯ ಹಾಡಿಗೆ ನೃತ್ಯ ಮಾಡಿ ಮಮತಾಮಯಿ ಯಶೋದೆ, ಪ್ರೀತಿ ತುಂಬಿದ ರಾಧೇ, ಭಕ್ತಿ ಲೋಕದ ಮೀರಾ ರ ದರ್ಶನ ಮಾಡಿಸಿದರು .
ನಂತರ ಸಂಕೀರ್ಣ ತಂಡದಿಂದ ಕಾಳಿ ಕೌಥುವಾ, ಅಯಗಿರಿ ನಂದಿನಿ ನಾಟ್ಯದಿಂದ ಶಕ್ತಿ ಸ್ವರೂಪಿಣಿಗೆ ನೃತ್ಯ ಅರ್ಪಣೆ ನೀಡಿದರು. ಭೋ ಶಂಭೋ, ಕೋಲಾಟ ಮುಂತಾದ ವೈವಿಧ್ಯಮಯ ನೃತ್ಯ ನೆರವೇರಿತು. ಯುದ್ಧ ಭೂಮಿಯಲ್ಲಿ ತನ್ನವರನ್ನೆಲ್ಲ ಕಂಡು ವಿಚಲಿತಗೊಂಡು ಹಿಂದೆ ಸರಿಯುವ ಅರ್ಜುನ ನಿಗೆ ಗೀತೋಪದೇಶದ ಮೂಲಕ ಧರ್ಮ ಜ್ಞಾನ, ಚೈತನ್ಯ ತುಂಬುವ “ಧರ್ಮ ಕ್ಷೇತ್ರ” ಇಡೀ ಸಭಾಂಗಣದಲ್ಲಿ ವಿದ್ಯುತ್ ಸಂಚಾರ ಮಾಡಿತು, ಪ್ರೇಕ್ಷಕರು ತದೇಕ ಚಿತ್ತದಿಂದ ನೃತ್ಯಾಸ್ವಾದ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗುರು ಸಪ್ನಾಕಿರಣ್ ಜೊತೆಗೆ ನೃತ್ಯಸಂಕೀರ್ಣದ ಕಲಾವಿದರಾದ ಅದಿತಿ ಕಿರಣ್, ಆಜ್ನ್ಯಾ ಆದೇಶ್, ಅಹಂತಿ ಸಂಕಮೇಶ್ವರನ್, ಅವನಿ ಶ್ರೀನಿವಾಸಮೂರ್ತಿ ರಾವ್, ಯಶ್ವಿ ಪಾಠಕ್, ತೇಜಸ್ವಿನಿ ಭಟ್, ಶರಣ್ಯ ಭಟ್, ನಿರ್ವಿ ಶೆಟ್ಟಿ, ಗ್ರೇಸ್ ಸ್ಟೀಪನ್ ರೋಡ್ರಿಗಸ್, ತನ್ವಿ ಪ್ರಸನ್ನ, ಹಂಸಿನಿ ಪ್ರಸನ್ನ, ಪ್ರಜ್ಞಾ ಅನಂತ್, ದೀಕ್ಷಾ ರಾಜ್, ಅಧಿತ್ರಿ ಸಂಕಮೇಶ್ವರನ್, ದಿವ್ಯ ನರಸಿಂಹನ್, ಯಾಶ್ನ ಶೆಟ್ಟಿ, ಪ್ರಾಪ್ತಿ ಪಾಠಕ್, ಮತ್ತು ಪ್ರಿಯ ವಿಜಯಕುಮಾರ್ ಪಾಲ್ಗೊಂಡಿದ್ದರು.
ಅನಂತ್ ರಘುನಾಥ್ ರವರು ದುಬೈಯ ಶಾಸ್ತ್ರೀಯ ನೃತ್ಯ ಶಾಲೆ “ಸಂಕೀರ್ಣ”ದ ಪರಿಚಯ ನೀಡಿದರು, ಅನಿಲ್ ರಾವ್, ಶ್ರೀಮತಿ ಚಂದ್ರಕಲಾ ರಾವ್, ಜಯರಾಮ್ ರಾವ್ ಕದ್ರಿ ಯವರುಗಳು ಪೇಜಾವರದ ಕಿರಿಯ ಸ್ವಾಮೀಜಿಯವರಿಗೆ ಫಲ ಕಾಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಶ್ರೀಮತಿ ಶ್ರೀಲೇಖಾ ಅನಂತ್, ಅನಂತ್ ರಘುನಾಥ್ ಮತ್ತು ವೇದವ್ಯಾಸ್ ಪುರಾಣಿಕ್ ರವರು ಪರ್ಯಾಯ ಪೀಠದ ಪಲಿಮಾರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ನರಸಿಂಹನ್ ರವರು ಉತ್ತಮ ಸಾಹಿತ್ಯದೊಂದಿಗೆ ವಿವರಣಾತ್ಮಕವಾಗಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಲೇಖಾ ಅನಂತ್ ವಂದನಾರ್ಪಣೆ ಗೈದರು. 2 ಗಂಟೆಗಳ ಕಾಲ ಪ್ರದರ್ಶನಗೊಂಡ ನೃತ್ಯಾರ್ಪಣೆ ಕಾರ್ಯಕ್ರಮದ ಸಂಪೂರ್ಣ ಆಯೋಜನೆಯನ್ನು ಅನಂತ್ ರಘುನಾಥ್ ಹಾಗು ಶ್ರೀಲೇಖಾ ಅನಂತ್ ವಹಿಸಿದ್ದರು. ಇವರಿಗೆ ವಿಜಯಲಕ್ಷ್ಮಿ, ಶ್ರೀನಿವಾಸ್ ಮೂರ್ತಿ, ಕಮಲಾ ಆಚಾರ್, ಪ್ರಸನ್ನ ಆಚಾರ್, ಹಾಗು ಪ್ರಿಯ ವಿಜಯ್ ಕುಮಾರ್ ಸಹಕಾರ ನೀಡಿದ್ದರು
ವರದಿ: ಆರತಿ ಅಡಿಗ, ದುಬೈ