ಉಡುಪಿ: ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ || ಅವರ ಪ್ರಥಮ ಬ್ರಹ್ಮಾವರ ಭೇಟಿಯ ಸಂದರ್ಭ ನಗರಕ್ಕೆ ಆಗಮಿಸಿದ ಶುಕ್ರವಾರ ಕರಾವಳಿ ಜಂಕ್ಷನ್ ಬಳಿ ಅದ್ದೂರಿಯಿಂದ ಸ್ವಾಗತಿಸಲಾಯಿತು.
ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರಲ್ ಹಾಗೂ ಇದರ ಸಹ ಇಗರ್ಜಿಗಳ ಪರವಾಗಿ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ || ಅವರಿಗೆ ಕೆಥೆಡ್ರಲ್‍ನ ವಿಕಾರ್ ಜನರಲ್ ವಂ ಸಿ ಎ ಐಸಾಕ್ ಮತ್ತು ಟ್ರಸ್ಟಿ ಅನಿಲ್ ರೊಡ್ರಿಗಸ್ ಹಾರ್ದಿಕವಾಗಿ ಸ್ವಾಗತಿಸಿಕೊಂಡರು.
ಬಳಿಕ ಕರಾವಳಿ ಜಂಕ್ಷನ್‍ನಿಂದ ಬ್ರಹ್ಮಾವರ ಕೆಥೆಡ್ರಲ್ ವರೆಗೆ ಅದ್ದೂರಿಯಾದ ವಾಹನ ರ್ಯಾಲಿ ಮೂಲಕ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ || ಕರೆದೊಯ್ಯಲಾಯಿತು. ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ || ಅವರಿಗೆ ವಿಶೇಷವಾಗಿ ಶ್ರಂಗರಿಸಿದ ಕುದುರೆಯ ಸಾರೋಟಿನ ರಥದ ಮಾದರಿಯ ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ವಿವಿಧ ರೀತಿಯ ವಾದ್ಯವೃಂದ, ನೂರಕ್ಕೂ ಅಧಿಕ ಬೈಕ್, ಕಾರುಗಳು, ಕ್ರಿಸ್ಮಸ್ ಸಂದೇಶ ಸಾರುವ, ಕರಾವಳಿಯ ಸಂಸ್ಕøತಿಯ ಯಕ್ಷಗಾನ ಇನ್ನಿತರ ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಥ್ ನೀಡಿದವು.
ಕಲ್ಕತ್ತಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಮೆಟ್ರೊಪೊಲಿಟನ್ ಡಾ ಜೋಸೆಫ್ ಮಾರ್ ದಿಯೊನಿಸಿಯಸ್, ಬ್ರಹ್ಮಾವರ್ ಸೀರಿಯನ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಯಾಕೂಬ್ ಮಾರ್ ಎಲಿಯಾಸ್, ಸಹಾಯಕ ಧರ್ಮಗುರುಗಳಾದ ವಂ ಅಬ್ರಾಹಾಂ ಕುರಿಯಾಕೋಸ್, ವಂ ಲಾರೆನ್ಸ್ ಡೇವಿಡ್ ಕ್ರಾಸ್ತಾ, ವಂ ನೊಯೆಲ್ ಲೂವಿಸ್, ವಂ ಲಾರೆನ್ಸ್ ಡಿ’ಸೋಜಾ, ಟ್ರಸ್ಟಿಗಳಾದ ವಿಲ್ಸನ್ ಲೂವಿಸ್ ಇತರರು ಉಪಸ್ಥಿತರಿದ್ದರು.