ಉಡುಪಿ: ಪ್ರತಿನಿತ್ಯ ದುಃಖಿತರನ್ನು ನೋಡಿ ಅವರ ಸೇವೆ ಮಾಡಿ ಅವರಿಗೆ ಸಾಂತ್ವನ ಹೇಳಿ ಅನಾರೋಗ್ಯ ದೂರಮಾಡಿ ಸಾಂತ್ವನ ಹೇಳುವುದು ಕಷ್ಟದ ಕೆಲಸ. ಈ ಕೆಲಸವನ್ನು ನಿರ್ವಹಿಸುವ ವೈದ್ಯಕೀಯ ಕ್ಷೇತ್ರದ ಸೇವೆ ಅತ್ಯಂತ ಶ್ರೇಷ್ಠ ಸೇವೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಶುಕ್ರವಾರ `ಪಂಚಲಹರಿ ಫೌಂಡೇಶನ್’ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿ,ಗುರುಗಳು ಹೇಗೆ ದೇವರಿಗೆ ಸಮಾನವೋ ಹಾಗೆಯೇ ವೈದ್ಯರಲ್ಲಿಯೂ ನಾವು ದೇವರನ್ನು ಕಾಣುತ್ತೇವೆ. ದೇವರು ವೈದ್ಯರ ಮೂಲಕ ನಮ್ಮ ಖಾಯಿಲೆಯನ್ನು ದೂರ ಮಾಡಿಸುತ್ತಾನೆ. ಹಿಂದೆ ಧಾರ್ಮಿಕ, ಶೈಕ್ಷಣಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಉಡುಪಿ ಇಂದು ವೈದ್ಯಕೀಯ ಕ್ಷೇತ್ರದಲ್ಲಿಯೂ ಹೆಸರು ಮಾಡಿದೆ ಎಂದರು.
ಗಾಂಧಿ ಆಸ್ಪತ್ರೆಯ ನಿರ್ದೇಶಕ ಎಂ ಹರಿಶ್ಚಂದ್ರ ಮಾತನಾಡಿ ಪಂಚಲಹರಿ ಫೌಂಡೇಶನ್‍ನ ಲಾಂಛನದಲ್ಲಿರುವಂತೆ ಟ್ರಸ್ಟ್ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯ ಜೊತೆಗೆ ಕೌಶಲಾಭಿವೃದ್ಧಿಗೆ, ಪರಿಸರದಲ್ಲಿನ ಹಸಿರು ಹೆಚ್ಚಳಕ್ಕೆ, ವೃದ್ಧಾಪ್ಯ,ಶೈಕ್ಷಣಿಕ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯ ಕಾರ್ಯ ಚಟುವಟಿಕೆಗಳನ್ನು ನಡೆಸಲಿದೆ.
ಪಂಚಲಹರಿ ಫೌಂಡೇಶನ್‍ನ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ಡಾ. ಜಿ.ಶಂಕರ್, ವೈದ್ಯಕೀಯ ಕ್ಷೇತ್ರದಲ್ಲಿ ಬಡವರ ಸೇವೆ ಅಗತ್ಯ. ಪಂಚಮಿ ಫೌಂಡೇಶನ್ ಮೂಲಕ ಗಾಂಧಿ ಆಸ್ಪತ್ರೆಯವರು ಮಾಡಲು ಉದ್ದೇಶಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಉಡುಪಿ ನಗರಸಭೆ ಕಮಿಷನರ್ ಡಿ. ಮಂಜುನಾಥಯ್ಯ, ಸಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವೈದ್ಯ ಡಾ. ಚನ್ನಕೇಶವ ರಾವ್, ರಂಗ ರುಕ್ಮಿಣಿಯ ಎಂ. ದಾಮೋದರ ಭಟ್, ಲಕ್ಷ್ಮೀ ಹರಿಶ್ಚಂದ್ರ ಉಪಸ್ಥಿತರಿದ್ದರು.
ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ ಪ್ರಸ್ತಾವಿಸಿದರು. ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪಂಚಮಿ ವಂದಿಸಿದರು. ರವೀಂದ್ರ ಎಚ್. ಕಾರ್ಯಕ್ರಮ ನಿರೂಪಿಸಿದರು.