ಉಡುಪಿ ಸ್ಮಾರ್ಟ್ ಸಿಟಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಸಕ ರಘುಪತಿ ಭಟ್ ಸೂಚನೆ
ಉಡುಪಿ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಲು ಈಗಾಗಲೇ ಡಿಪಿಎಆರ್ ತಯಾರಿಸಲಾಗಿದ್ದು, ಯೋಜನೆಯನ್ನು ಶೀಘ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಶಾಸಕ ಕೆ ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ಸ್ಮಾರ್ಟ್ ಸಿಟಿಯನ್ನು ಅನುಷ್ಠಾನಗೊಳಿಸುವಲ್ಲಿ ಒನ್ ಮಣಿಪಾಲ್ ತಂತ್ರಾಶದ ಕಾರ್ಯಾಚರಣೆ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಇಲಾಖಾ ಹಂತದ ಕಾರ್ಯ ವೈಖರಿ ಬಗ್ಗೆ ತಿಳಿಯ ಪಡಿಸಲಾಯಿತು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನಸಾಮಾನ್ಯರಿಗೆ ಶಿಕ್ಷಣ, ಆರೋಗ್ಯ, ಸಾರಿಗೆ, ಭದ್ರತೆ, ಜಿಲ್ಲಾಡಳಿತ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಹಣಕಾಸು ವ್ಯವಸ್ಥೆ, ಕಾನೂನು, ವಿದ್ಯುತ್ ಪೂರೈಕೆ ಈ ಎಲ್ಲಾ ಅಂಶಗಳನ್ನು ವೈಜ್ಞಾನಿಕವಾಗಿ ತಲುಪಿಸಲು ಅಗತ್ಯ ಕಾರ್ಯತಂತ್ರಗಳನ್ನು ಸಂಬಂಧಿಸಿದ ಇಲಾಖಾ ಹಂತದಲ್ಲಿ ವ್ಯವಸ್ಥಿತವಾಗಿ ರೂಪಿಸುವ ಬಗ್ಗೆ. ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಜಿ ಜಗದೀಶ್, ಪೋಲಿಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ಯೋಜನಾ ನಿರ್ದೇಶಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು, ನಗರ ಸಭೆಯ ಕಾರ್ಯಪಾಲಕ ಅಭಿಯಂತರರು, ಮಾಹೆ ಮಣಿಪಾಲದ ವಾಸ್ತುಶಿಲ್ಪದ ನಿರ್ದೇಶಕರು ಉಪಸ್ಥಿತರಿದ್ದರು.