ಉಡುಪಿ: ಹಸಿವು ಮುಕ್ತ ಕರ್ನಾಟಕ ರಾಜ್ಯ ಸರ್ಕಾರದ ಕೊಡುಗೆ – ಆಸ್ಕರ್ ಫೆರ್ನಾಂಡಿಸ್

Spread the love

ಉಡುಪಿ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತದಲ್ಲೇ ರಾಜ್ಯದ ಎಲ್ಲಾ ಬಡವರಿಗೆ 1 ರೂ. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿತು. ಇದೀಗ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡುವ ಹಸಿವು ಮುಕ್ತ ಕರ್ನಾಟಕ ನಿರ್ಮಾಣವಾಗಿದೆ ಎಂದು ಎಐಸಿಸಿ ಸದಸ್ಯ ಹಾಗೂ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಕೇಂದ್ರದಲ್ಲಿ ಹಿಂದಿನ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡುವುದಕ್ಕಿಂತ ಮುಂಚೆಯೇ ರಾಜ್ಯ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಚುನಾವಣೆಯ ಸಂದರ್ಭದಲ್ಲಿ ತಾನು ನೀಡಿದ ಭರವಸೆಯನ್ನು ಈಡೇರಿಸಿದೆ. ಎರಡು ವರ್ಷದಲ್ಲಿ ಸರ್ಕಾರ ಅಸಾಧಾರಣ ಸಾಧನೆ ಮಾಡಿದೆ ಎಂದು ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿನ ಒಂದಂಕಿ ಲಾಟರಿ ಹಗರಣದ ಕುರಿತು ಕೇಳಿದಾಗ ಈ ಬಗ್ಗೆ ಮುಖ್ಯಮಂತ್ರಿ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕೇಂದ್ರ ಒಂದು ವರ್ಷದ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೌಲ್ಯಮಾಪನ ನಾನು ಮಾಡಬೇಕಾಗಿಲ್ಲ. ದೇಶದಲ್ಲಿನ ರೈತರ ಆತ್ಮಹತ್ಯೆ ಪ್ರಕರಣವನ್ನು ನೋಡಿದಾಗ ಅದು ನಮಗೆ ತಿಳಿಯುತ್ತದೆ. ಹಿಂದೆ ದೇಶದ ಯಾವೆಲ್ಲ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಯಾವ ಪ್ರಮಾಣದಲ್ಲಿ ನಡೆಯುತ್ತಿತ್ತು ಹಾಗೂ ಇಂದು ಯಾವ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದನ್ನು ನೋಡಿದರೆ ಅದೇ ಸರ್ಕಾರದ ಮೌಲ್ಯ ಮಾಪನವಾಗುತ್ತದೆ ಎಂದರು.
ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂತಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 124ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು, 70 ಇದ್ದಾಗ ಎಷ್ಟಿತ್ತು, 50 ಡಾಲರ್ ಇದ್ದಾಗ ಎಷ್ಟಿತ್ತು, ಈಗ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಎಷ್ಟಿದೆ ಎಂದು ಲೆಕ್ಕಹಾಕಿದರೆ ಕೇಂದ್ರ ಸರ್ಕಾರ ಎಷ್ಟು ದರ ಕಡಿಮೆ ಮಾಡಿದೆ ಎಂಬುದು ತಿಳಿಯುತ್ತದೆ. ದರ ಕಡಿಮೆ ಮಾಡಿ ತೆರೆಗೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೇಂದ್ರ ಸಚಿವ ಅರವಿಂದ ಸುಬ್ರಹ್ಮಣ್ಯಂ ಅವರೇ ನಾವು ಯಾವುದೇ ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ. ಇದು ಕೇಂದ್ರ ಎಷ್ಟು ಸಾಧನೆ ಮಾಡಿದೆ ಎಂಬುದನ್ನು ತಿಳಿಸುತ್ತದೆ ಎಂದರು.
ಶಾಸಕ ಪ್ರಮೋದ್ ಮಧ್ವರಾಜ ಮಾತನಾಡಿ, ಜಿಲ್ಲೆಯಲ್ಲಿನ ಪ್ರಮುಖ ಸಮಸ್ಯೆಗಳಾದ ವಿದ್ಯುತ್ ಕಡಿತ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಮುಂದಿನ ವರ್ಷ ನೀರಿನ ಸಮಸ್ಯೆಯನ್ನು ಮತ್ತಷ್ಟು ನಿವಾರಿಸುವ ನಿಟ್ಟಿನಲ್ಲಿ 100 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದರು.
ಆಸ್ಕರ್ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಮುಖಂಡರಾದ ಎಂಎ ಗಫೂರ್, ಅಶೋಕ್ ಕುಮಾರ್ ಕೊಡವೂರು, ಹರೀಶ್ ಕಿಣಿ, ಗಿರೀಶ್ ಪುತ್ರನ್, ನರಸಿಂಹ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.


Spread the love