ಉಡುಪಿ : ಹತ್ತು ವರ್ಷಗಳ ಹಿಂದೆ ನಡೆದ ಹಾಯ್ ಮಾರುತ ವಾರಪತ್ರಿಕೆಯ ಸಂಪಾದಕ ಹಿತೇಂದ್ರ ಪ್ರಸಾದ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತ ಗೊಳಿಸಿ ತೀರ್ಪು ನೀಡಿದೆ.
ರೌಡಿ ಪಿಟ್ಟಿ ನಾಗೇಶನ ಸಹಚರರಾದ ಅಲೆವೂರಿನ ಸಲೀಂ ಅಲಿ ಯಾನೆ ಮಂಚಿ ಸಲೀಂ(31), ಉಡುಪಿ ಕೊಳಲಗಿರಿಯ ರಮೇಶ ಅಲಿಯಾಸ್ ಅಟ್ಟೆ ರಮೇಶ(37), ಕುಕ್ಕಿಕಟ್ಟೆ ಸಮೀಪದ ಮಣಿಕಂಠ(32) ಎಂಬವರು ದೋಷ ಮುಕ್ತಗೊಂಡ ಆರೋಪಿಗಳು.
ಮಣಿಪಾಲದ ತಲ್ಲೂರ್ಸ್ ಬಾರ್ ಸಮೀಪ 2006ರ ಆ.21ರಂದು ರಾತ್ರಿ 10 ಗಂಟೆಗೆ ಉಡುಪಿ ಕಾಡಬೆಟ್ಟು ನಿವಾಸಿ ಹಿತೇಂದ್ರ ಪ್ರಸಾದ್‌ರಿಗೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ದೇಹದ 50 ಕಡೆ ತಲವಾರಿನಿಂದ ತಿವಿದ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಹಿತೇಂದ್ರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪಿಟ್ಟಿ ನಾಗೇಶನ ಕಾನೂನು ಬಾಹಿರ ವ್ಯವಹಾರದ ಬಗ್ಗೆ ಹಿತೇಂದ್ರ ಪ್ರಸಾದ್ ತನ್ನ ಪತ್ರಿಕೆಯಲ್ಲಿ ಬರೆದಿರುವುದಲ್ಲದೆ, ಆತನ ವಿರೋಯಾಗಿದ್ದ ವಿನೋದ್ ಶೆಟ್ಟಿಗಾರ್ ಜೊತೆ ಸಖ್ಯ ಬೆಳೆಸಿರುವುದೇ ಕೊಲೆಗೆ ಕಾರಣ ಎಂದು ದೂರಲಾಗಿತ್ತು. ಮಣಿಪಾಲದ ಅಂದಿನ ವೃತ್ತ ನಿರೀಕ್ಷಕ ಸಂಜೀವ ನಾಯ್ಕಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ 27 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಆರೋಪಿಗಳ ವಿರುದ್ಧ ಸರಿಯಾದ ಸಾಕ್ಷಾಧಾರಗಳು ಸಿಗದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾೀಶ ಶಿವಶಂಕರ ಅಮರಣ್ಣನವರ್ ಆರೋಪಿಗಳನ್ನು ದೋಷಮುಕ್ತಿಗೊಳಿಸಿ ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಟಿ.ವಿಜಯಕುಮಾರ್ ಹಾಗೂ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.