ಉಡುಪು ಅವರವರ ಇಷ್ಟ: ಹಿಜಾಬ್ ನಿಷೇಧ ವಾಪಾಸ್ ಗೆ ಹೇಳಿದೀನಿ – ಸಿದ್ದರಾಮಯ್ಯ
ಮೈಸೂರು: ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದೀನಿ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ ಹೇಳಿದರು.
ಸಾರ್ವಜನಿಕರಿಂದ ಬಂದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನೋ ಹಿಜಾಬ್, ಎಲ್ಲರು ಹಿಜಾಬ್ ಹಾಕಿಕೊಂಡು ಹೋಗಬಹುದು. ಆದೇಶ ಹಿಂಪಡೆಯಲು ಹೇಳಿದ್ದೇನೆ. ಡ್ರೆಸ್, ಊಟ ಮಾಡುವುದು ನಿಮಗೆ ಸೇರಿದ್ದು. ನಾನೇಕೆ ನಿಮಗೆ ಅಡ್ಡಿ ಪಡಿಸಲಿ. ನೀನು ಯಾವ್ ಡ್ರೆಸ್ ಹಾಕಿಕೊಳ್ಳುತ್ತೀಯಾ ಹಾಕಿಕೋ. ನೀನು ಯಾವ ಊಟ ಮಾಡುತ್ತೀಯಾ ಮಾಡು. ನೀನು ಊಟ ಮಾಡುವುದು ನಿನ್ನ ಹಕ್ಕು. ನಾನು ಊಟ ಮಾಡುವುದು ನನ್ನ ಹಕ್ಕು. ನಾನು ದೋತಿ ಮತ್ತು ಜುಬ್ಬ ಹಾಕಿಕೊಳ್ಳುತ್ತೇನೆ. ನೀನು ಪ್ಯಾಂಟ್ ಶರ್ಟ್ ಹಾಕಿಕೊಂಡರೆ ಹಾಕಿಕೋ, ಇದರಲ್ಲಿ ತಪ್ಪೇನಿದೆ. ಮತಕ್ಕಾಗಿ ರಾಜಕಾರಣ ಮಾಡುವುದು ತಪ್ಪು. ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಇದರಿಂದ ವಿಚಲಿತರಾಗುವ ಪ್ರಶ್ನೆ ಇಲ್ಲ. ರಾಜೀ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಸುಳ್ಳು, ಮೋಸ ಮಾಡುವವರ ಜೊತೆ ಇರಬೇಡಿ ಎಂದರು.
ನಾವು ಎಲ್ಲ ಜಾತಿ, ಎಲ್ಲಾ ಧರ್ಮದವರಿಗೆ ಮಾತ್ರವಲ್ಲ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು 10 ಕೆಜಿ ಅಕ್ಕಿ ಪಡೆಯುತ್ತಿಲ್ಲವಾ ? ಬಿಜೆಪಿಯವರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ ? ಬಿಜೆಪಿಯವರು ಗೃಹಜ್ಯೋತಿ, ಗೃಹಲಕ್ಷ್ಮಿ ಯ ಹಣ ಪಡೆಯುತ್ತಿಲ್ಲವೇ ? ನಮ್ಮ ಗ್ಯಾರಂಟಿ ಸ್ಕೀಂ ಗಳ ಲಾಭ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಸುಳ್ಳು ಹೇಳುವವರ, ನಮ್ಮ ಸರ್ಕಾರದ ಲಾಭ ಪಡೆದೂ ನಕ್ರಾ ಆಡುವವರ ಜತೆ ಹೋಗಬೇಡಿ ಎಂದರು.