ಉತ್ತಮ ಆಡಳಿತದ ಗುರಿ- ಸಚಿವ ಪ್ರಮೋದ್ ಮದ್ವರಾಜ್
ಉಡುಪಿ : ಜನರಿಗೆ ಉತ್ತಮ ಆಡಳಿತ ನೀಡುವುದೊಂದೇ ತಮ್ಮ ಅಧಿಕಾರವಧಿಯ ಗುರಿ ಎಂದು ಮೀನುಗಾರಿಕೆ ಮತ್ತುಯುವಜನ ಸೇವೆ ಹಾಗೂ ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಕಚೇರಿಯ ಉದ್ಘಾಟನೆ ಬಳಿಕ ಕೋರ್ಟ್ ಹಾಲ್‍ನಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜನಸೇವೆಯನ್ನು ಮಾತ್ರ ಮನದಲ್ಲಿರಿಸಿ ಅಧಿಕಾರವನ್ನು ಚಲಾಯಿಸುವುದು ತಮ್ಮ ಉದ್ದೇಶವಾಗಿದ್ದು, ಎಲ್ಲ ಅಧಿಕಾರಿಗಳು ಇದಕ್ಕೆ ಪೂರಕವಾಗಿ ಕಾರ್ಯೋನ್ಮುಖರಾಗಬೇಕು.
ಪರಿವರ್ತನೆ ಉತ್ತಮ ಆಡಳಿತದ ಮೂಲಕ ಸಾಧಿಸಿ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಉಡುಪಿ ಹೊರಹೊಮ್ಮಬೇಕು ಎಂದ ಅವರು ಸರ್ಕಾರದ ಯೋಜನೆಗಳ ಫಲ ಜನರಿಗೆ ಲಭ್ಯವಾಗಬೇಕು ಎಂದರು.
ಅಧಿಕಾರಿಗಳು ತಮ್ಮ ಕಾರ್ಯಶೈಲಿ, ಹವ್ಯಾಸಗಳನ್ನು ಜನಪರವಾಗಿ ಬದಲಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಸತತ ಕರ್ತವ್ಯಪರತೆಯನ್ನು ರೂಢಿಸಿಕೊಳ್ಳಬೇಕು ಎಂದರು. ಜಿಲ್ಲೆಯ ಎಲ್ಲ ಜನರಿಗೂ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ದನಿಯಾಗಿ ಅವರ ಸಮಸ್ಯೆಯನ್ನು ಪರಿಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದರು.
ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ವಿಳಂಬವಾದರೆ ಸಹಿಸುವುದಿಲ್ಲ ಎಂದ ಸಚಿವರು, ಕಂದಾಯ ಇಲಾಖೆ, ನಗರಸಭೆ, ಪಟ್ಟಣಪಂಚಾಯತ್, ಪುರಸಭೆ ಮುಂತಾದ ಜನರೊಂದಿಗೆ ನೇರ ಸಂಪರ್ಕ ಇರುವ ಇಲಾಖೆಗಳು ಜನಪರವಾಗಿ ಕಾರ್ಯನಿರ್ವಹಿಸಬೇಕೆಂದರು.
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತುನೀಡಿದ್ದು, ಜನರಿಗೆ ಉತ್ತಮ ಆಡಳಿತದ ಅನುಭವ ನೀಡಲು ಪ್ರತಿಯೊಬ್ಬರು ತಮ್ಮೊಂದಿಗೆ ಕೈಜೋಡಿಸಬೇಕೆಂದು ಸಚಿವರು ನುಡಿದರು.
27 ಮತ್ತು 28 ರಂದು ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಜಿಲ್ಲೆಯ ಪ್ರಮುಖ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಮಾಹಿತಿಯನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಪಡೆದುಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅವರು, ಪ್ರಾಕೃತಿಕ ವಿಕೋಪ, ಕುಡಿಯುವ ನೀರು, ಕಡಲಕೊರೆತ, ಅನ್ನಭಾಗ್ಯ ಯೋಜನೆ, ವಿದ್ಯಾಸಿರಿ, ಆರ್ ಟಿ ಇ, ಬಿದಾಯಿ, ಸಮಾಜ ಕಲ್ಯಾಣ ಇಲಾಖೆಗಳ ಪ್ರಗತಿ ಹಾಗೂ ಗುರಿ ಸಾಧನೆಗೆ ಇರುವ ಸವಾಲುಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪಶ್ಚಿಮವಾಹಿನಿಯಂತಹ ಯೋಜನೆಗೆ ನೋಡಲ್ ಇಲಾಖೆ ಹಾಗೂ ಅಧಿಕಾರಿಯನ್ನು ಗುರುತಿಸುವುದರಿಂದ ಯೋಜನೆ ಪ್ರಗತಿ ಸಾಧ್ಯ ಎಂದ ಜಿಲ್ಲಾಧಿಕಾರಿಗಳು, ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಜುಲೈ 2 ರಂದು 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ರಜತಾದ್ರಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಶಾಲೆಗಳವರು, ಮಕ್ಕಳ ಹೆತ್ತವರು, ಮಕ್ಕಳನ್ನು ಕರೆದೊಯ್ಯುವ ವಾಹನಗಳ ವರು ಎಲ್ಲರೂ ಸಭೆಯಲ್ಲಿ ಭಾಗವಹಿಸಬೇಕೆಂದು ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.
ಸಭೆಯಲ್ಲಿ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ ಪಿ ಅಣ್ಣಾಮಲೈ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.