ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದು – ಪಿ.ಎಸ್.ವೆಂಕಪ್ಪ
ಮಂಗಳೂರು: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‍ಲೈನ್-1098 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವರೇ ‘ ತೆರೆದ ಮನೆ ‘ ಎಂಬ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಬೆಳ್ತಂಗಡಿ ಯಲ್ಲಿ ಜರುಗಿತು. ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್‍ಲೈನ್‍ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಸಭೆಯನ್ನುದ್ಧೇಶಿಸಿ ಮಕ್ಕಳ ಬಗ್ಗೆ ಹೆತ್ತವರು ಕಾಳಜಿ ವಹಿಸುವುದರೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು, ಆಪ್ತವಾಗಿ ಮಾತನಾಡಿ, ಅವರ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಸರಿ ತಪ್ಪುಗಳನ್ನು ತಿಳಿ ಹೇಳಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಇಲಾಖಾಧಿಕಾರಿ ಪಿ.ಎಸ್.ವೆಂಕಪ್ಪ ಹೇಳಿದರು. ನಂತರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಬಗ್ಗೆ ಹಾಗೂ ಪೊಕ್ಸೋ ಮತ್ತು ಬಾಲನ್ಯಾಯ ಕಾಯಿದೆ ಕುರಿತು ಮಾಹಿತಿ ನೀಡಿದ ಅವರು ಕಾಯಿದೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ಕಿವಿಮಾತನ್ನು ಹೇಳಿದ ಅವರು, ಗಾಂಜಾ, ಡ್ರಗ್ಸ್, ಮಾದಕ ವಸ್ತು ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸರಕಾರದಿಂದ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಬಾಲಕಾರ್ಮಿಕ ಪದ್ಧತಿ ಕುರಿತು ಹಿರಿಯ ಕಾರ್ಮಿಕ ನಿರೀಕ್ಷಕರ ಗಣಪತಿ ಹೆಗ್ಡೆ ಮಾಹಿತಿ ನೀಡಿದರು, ಚೈಲ್ಡ್‍ಲೈನ್-1098 ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಪ್ರಸ್ತಾವಿಕವಾಗಿ ಮಾತುಗಳನ್ನಾಡಿದರು.
ಮಕ್ಕಳಿಗೆ ತರಕಾರಿ, ಸೊಪ್ಪು, ಹಣ್ಣು ಹಂಪಲು, ಬೇಳೆ ಕಾಳು, ಮೊಳಕೆ ಬರಿಸಿದ ಕಾಳು, ಹಾಲು ಮೊಸರು ಹೀಗೆ ಪೌಷ್ಟಿಕಾಂಶವಿರುವ ಆಹಾರವನ್ನೇ ನೀಡಬೇಕು ಎಂದ ಅವರು ಚುಚ್ಚುಮದ್ದು ಮತ್ತು ಲಸಿಕೆಗಳ ಬಗ್ಗೆ ವಿವರಿಸಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ರೋಗ ಲಕ್ಷಣಗಳನ್ನು ವಿವರಿಸಿ, ಚಿಕಿತ್ಸೆಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಲ್ಲಿ ಮತ್ತು ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಹಾಗೂ ಆಯ್ದ ಖಾಸಾಗಿ ಆಸ್ಪತ್ರೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಆರೋಗ್ಯ ಇಲಾಖೆ ಅಮ್ಮೀ.ಎ. ಮಾಹಿತಿಯನ್ನು ನೀಡಿದರು.
ಗುಂಪು ಚರ್ಚೆಯನ್ನು ಚೈಲ್ಡ್‍ಲೈನ್-1098ನ ಜಯಂತಿ ಕೋಕಳ, ಕೀರ್ತೀಶ್ ಕಲ್ಮಕಾರು ನಡೆಸಿದರು, ವಿಷಯವನ್ನು ಮಕ್ಕಳ ಸಹಾಯವಾಣಿಯ ನಾಗರಾಜ್ ಪಣಕಜೆ ಸಭೆಗೆ ಮಂಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಯ ಚಿದಾನಂದ, ಶಿಕ್ಷಣ ಇಲಾಖೆಯ ಗಣೇಶ್ ಐತಾಳ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಜಾಕೀರ್ ಹುಸೈನ್, ಪೊಲೀಸ್ ಇಲಾಖೆಯ ಮಹಿಳಾ ಪೊಲೀಸ್ ಸವಿತಾ.ಎ ಹಾಗೂ ಧನಲಕ್ಷ್ಮೀ. ಡಿ, ಮುಖ್ಯ ಶಿಕ್ಷಕಿ ಈಶ್ವರಿ.ಕೆ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಪ್ರಥಮ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿ ನಿತಿನ್.ಬಿ.ಜೆ, ಮನೀಷ್ ಉಪಸ್ಥಿತರಿದ್ದರು. ಚೈಲ್ಡ್‍ಲೈನ್-1098 ರೇವತಿ ಹೊಸಬೆಟ್ಟು ನಿರೂಪಿಸಿ, ಸಹಶಿಕ್ಷಕ ರಾಜೇಂದ್ರ.ಎಂ ವಂದಿಸಿದರು. ಪ್ರೌಢ ಶಾಲೆಯ ಶಿಕ್ಷಕರುಗಳು, ವಿಧ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.