ಉತ್ಪಾದನಾ ಸುಧಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತಾ ಬೇಸಾಯ

Spread the love

ಉತ್ಪಾದನಾ ಸುಧಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತಾ ಬೇಸಾಯ

ಮಂಗಳೂರು :  ಮರುನಾಟಿ ಮತ್ತು ಪುನಶ್ಚೇತನ ನಿರ್ವಹಣೆ ಕಾರ್ಯಕ್ರಮ (ಖ & ಖ): ತೆಂಗು ತೋಟಗಳಲ್ಲಿ ಹಳೆಯ ಮತ್ತು ಅನುತ್ಪಾದಕ ಗಿಡಗಳು, ಕೀಟ ರೋಗಗಳ ಭಾದೆ, ತೇವಾಂಶ ಮತ್ತು ಪೋಷಕಾಂಶಗಳ ಕೊರತೆ ಹಾಗೂ ಹವಾಮಾನ ವೈಪ್ಯರಿತ್ಯ ಕಾರಣಗಳಿಂದಾಗಿ ರೈತರ ತೋಟದಲ್ಲಿ ಇಳುವರಿಯು ಕುಂಠಿತವಾಗುತ್ತಿದೆ. ತೆಂಗಿನ ತೋಟಗಳಲ್ಲಿ ಪುನಃ ಹೊಸದಾಗಿ ಸಸಿಗಳನ್ನು ನೆಡುವುದು, ಕಡಿಮೆ ಇಳುವರಿ/ಅನುತ್ಪಾದಕ ಮರಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯಿಂದ ತೆಂಗು ಅಭಿವೃದ್ದಿ ಮಂಡಳಿಯ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿದೆ. ತೆಂಗಿನ ತೋಟಗಳ ಪುನಶ್ಚೇತನ ಹಾಗೂ ಮರುನಾಟಿ ಮತ್ತು ನಿರ್ವಹಣೆಗಾಗಿ ಒಂದು ಹೆ. ಪ್ರದೇಶಕ್ಕೆ ತಗಲುವ ವೆಚ್ಚ ರೂ. 1,10,000/- ಪ್ರತಿ ಫಲಾನುಭವಿಗೆ ಕನಿಷ್ಟ 0.4 ಹೆ. ನಿಂದ ಗರಿಷ್ಟ 1 ಹೆ.ವರೆಗೆ ಮಿತಿಗೊಳಿಸಿ, ಪ್ರತಿ ಹೆ. ರೂ. 44,750/- ಮೊದಲನೇ ವರ್ಷ ಹಾಗೂ ರೂ. 8750/- ಎರಡನೇ ವರ್ಷದ ನಿರ್ವಹಣೆಗೆ ಸಹಾಯಧನವನ್ನು ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತೆಂಗಿನಲ್ಲಿ ಪ್ರಾತ್ಯಕ್ಷತೆ ತಾಕುಗಳ ನಿರ್ವಹಣೆ: ತೆಂಗು ಬೆಳೆಯ ರೈತರು ತಮ್ಮ ತೋಟದಲ್ಲಿ ಗೊಬ್ಬರ, ಅಂತರಬೇಸಾಯ ಹಾಗೂ ಇನ್ನೀತರೆ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ತೆಂಗಿನ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಈ ರೀತಿಯ ಹೊಸ ಪ್ರಾತ್ಯಕ್ಷತೆ ತಾಕುಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಂದು ಹೆ. ಪ್ರದೇಶಕ್ಕೆ ತಗಲುವ ಘಟಕ ವೆಚ್ಚ ರೂ. 35,000/- ಪ್ರತಿ ವರ್ಷಕ್ಕೆ ರೂ. 17,500/- ಸಹಾಯಧನವನ್ನು ಎರಡು ವಾರ್ಷಿಕ ಕಂತುಗಳಲ್ಲಿ ನೀಡಲಾಗುವುದು. ಪ್ರತಿ ಫಲಾನುಭವಿಗೆ ಕನಿಷ್ಟ 0.5 ಹೆ.ನಿಂದ ಗರಿಷ್ಟ 1 ಹೆ. ವರೆಗೆ ಮಿತಿಗೊಳಿಸಿ ಸಹಾಯಧನವನ್ನು ನೀಡಲಾಗುವುದು.

ತೆಂಗು ಬೆಳೆಗೆ ತಗಲುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕಾರ್ಯಕ್ರಮ: ತೆಂಗು ಬೆಳೆಗೆ ಬರುವ ವಿವಿಧ ಕೀಟಗಳಾದ ತೆಂಗು ಕಪ್ಪು ತಲೆ ಹುಳು, ಕೆಂಪು ಮೂತಿ ಹುಳು ರೈನೊಸರಸ್ ದುಂಬಿ ಮತ್ತು ರೋಗಗಳಾದ ಕಾಂಡ ಸೋರುವ ರೋಗ, ಬಡ್‍ರೋಟ್, ಅಣಬೆ ರೋಗ ಇತ್ಯಾದಿಗಳ ಸಮಗ್ರ ನಿರ್ವಹಣೆ ಬಗ್ಗೆ ಕಾರ್ಯಕ್ರಮ ರೂಪಿಸಲಾಗಿದೆ. ಕೀಟ ಮತ್ತು ರೋಗಗಳಿಗೆ ಅನುಗುಣವಾಗಿ ಅವುಗಳ ನಿಯಂತ್ರಣಕ್ಕಾಗಿ ರೈತರು ಖರೀದಿಸಿದ ಸಸ್ಯ ಸಂರಕ್ಷಣೆ ಔಷಧಿ ಬಿಲ್ಲುಗಳಿಗೆ ರೂ. 5250/- ಪ್ರತಿ ಹೆ.ಗಳಿಗೆ ಶೇ.75 ರಂತೆ ಗರಿಷ್ಟ 2 ಹೆ. ವರೆಗೆ ಮಿತಿಗೊಳಿಸಿ ಸಹಾಯಧನ ಒದಗಿಸಲಾಗುವುದು.

ತೆಂಗಿನ ತೋಟಗಳ ಪ್ರದೇಶ ವಿಸ್ತರಣೆ :ತೆಂಗಿನಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ತೆಂಗು ಬೆಳೆಗಾರರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಎಳೆನೀರು ಕಾಯಿಗಳ ಇಳುವರಿ ಪಡೆಯಲು ತೆಂಗು ಗಿಡ್ಡ ಮತ್ತು ಹೈಬ್ರೀಡ್ ತಳಿಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುವುದು. ಆದ್ದರಿಂದ ಹೊಸದಾಗಿ ತೆಂಗಿನ ತೋಟ ನಿರ್ಮಾಣ ಮಾಡಲು ಇಚ್ಛಿಸುವವರು 2019-20 ನೇ ಸಾಲಿನಲ್ಲಿ ತೆಂಗಿನ ತೋಟ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಒಟ್ಟು ಘಟಕ ವೆಚ್ಚದ ಶೇ. 50 ರಂತೆ ಸಂಕರಣ ತಳಿಗೆ ರೂ. 13500/- ಗಿಡ್ಡ ತಳಿಗೆ ರೂ.15000/- ಹಾಗೂ ಎತ್ತರದ ತಳಿಗೆ ರೂ.13000/- ಪ್ರತೀ ಫಲಾನುಭವಿಗೆ ಗರಿಷ್ಟ 4 ಹೆಕ್ಟೇರ್‍ಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಯೋಜನೆಗಳಿಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು. ಇವರ ಪ್ರಕಟಣೆ ತಿಳಿಸಿದೆ.


Spread the love