ಉದ್ಯಮ ಪರವಾನಿಗೆ ನವೀಕರಿಸದ 8 ಅಂಗಡಿಗಳ ಮೇಲೆ ಪಾಲಿಕೆ ಧಾಳಿ
ಮಂಗಳೂರು: ಉದ್ಯಮ ಪರವಾನಿಗೆ ನವಿಕರಿಸದೆ ಇರುವ ಅಂಗಡಿಗಳ ಮೇಲೆ ಮಹಾ ನಗರಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿದರು.
ಉದ್ಯಮ ಪರವಾನಿಗೆಯನ್ನು ಹೊಂದಿರದ ವ್ಯಾಪಾರಿಗಳ ವಿರುದ್ದ ಕ್ರಮಕೈಗೊಳ್ಳಲು ಮುಂದಾದ ವೇಳೆ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಸ್ಥಳದಿಂದ ತಪ್ಪಿಸಿಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸ್ಥಾಯಿ ಸಮಿತಿಯ ಕವಿತಾ ಸನಿಲ್ ಅವರು ನಗರಪಾಲಿಕೆಯ ವತಿಯಿಂದ ಈಗಾಗಲೇ ಜೂನ್ 30 ರ ಒಳಗೆ ಉದ್ಯಮ ಪರವಾನಿಗೆ ನವೀಕರಿಸುವಂತೆ ಎಲ್ಲಾ ಅಂಗಡಿ ಮಾಲಿಕರಿಗೆ ಮಾಧ್ಯಮಗಳ ಮೂಲಕ ಸೂಚನೆಯನ್ನು ನೀಡಿದ್ದು, ಇನ್ನೂ 7782 ಮಂದಿ ಪರವಾನಿಗೆಯನ್ನು ನವೀಕರಿಸಿಲ್ಲ. ಪಾಲಿಕೆ ವತಿಯಿಂದ ಜುಲೈ 1 ರಂದು ಧಾಳಿ ನಡೆಸಿದ್ದು, ಕೆಲವೊಂದು ವ್ಯಕ್ತಿಗಳು ಪರವಾನಿಗೆಯನ್ನು ನವಿಕರಿಸಿದ್ದಾರೆ. ಇಂದು 8 ಅಂಗಡಿಗಳನ್ನು ಪರೀಶಿಲನೆ ನಡೆಸಿದ್ದು ಪರವಾನಿಗೆ ನವೀಕರಿಸದೆ ಇರುವುದು ಕಂಡುಬಂದಿದೆ. ಪಾಲಿಕೆಯ ವತಿಯೀಂದ ಮುಂದೆ ಇಂತಹ ಧಾಳಿಗಳನ್ನು ಕೈಗೊಳ್ಳಲಾಗುವುದು, ಕಾನೂನು ಪಾಲಿಸದವರ ವಿರುದ್ದ ಸೂಕ್ತ ಕ್ರಮವನ್ನು ಕೂಡ ಕೈಗೊಳ್ಳಲಾಗುವುದು ಎಂದರು.
ಉದ್ಯಮ ಪರವಾನಿಗೆ ನವೀಕರಣದಿಂದ ಪಾಲಿಕೆಯು ರೂ 21 ಲಕ್ಷ ತೆರಿಗೆಯನ್ನು ಸಂಗ್ರಹಿಸಿದ್ದು, ಆಸ್ತಿ ತೆರಿಗೆಯಿಂದ ರೂ 45 ಲಕ್ಷ ಸಂಗ್ರಹಿಸಲಾಗಿದೆ. ನಗರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಲಭ್ಯವಾಗಬೇಕಾದರೆ, ಜನರು ಕ್ಲಪ್ತ ಸಮಯದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಮನವಿ ಮಾಡಿದರು. ಯಾರೇ ಕೂಡ ಉದ್ಯಮವನ್ನು ಆರಂಭಿಸುವುದಾದರೆ ಅದಕ್ಕೆ ಸೂಕ್ತ ಪರವಾನಿಗೆ ಅಗತ್ಯವಿದ್ದು, ಕಾನೂನಿನ ಉಲ್ಲಂಘನೆ ತಪ್ಪಿಸುವಂತೆ ಮನವಿ ಮಾಡಿದರು.
ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ, ಪರಿಸರ ಅಭಿಯಂತರ ಮಧು ಹಾಗೂ ಇನ್ನಿತರರು ಉಪಸ್ಥಿತರಿದ್ದರು.