ಉದ್ಯಾವರದಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಯತ್ನ – ಇಬ್ಬರ ಬಂಧನ, ರೂ 2.24 ಲಕ್ಷ ಮೌಲ್ಯದ ಸೊತ್ತು ವಶ
ಉಡುಪಿ: ಕಾರಿನಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಪೊಲೀಸರ ತಂಡ ಬಂಧಿಸಿದೆ.
ಬಂಧಿತರನ್ನು ಕಕ್ಕುಂಜೆ ನಿವಾಸಿ ಮೊಹಮ್ಮದ್ ಆಲಿ (33) ಮತ್ತು ಮೂಡುಪೆರಂಪಳ್ಳಿ ನಿವಾಸಿ ಶ್ರೀಧರ (32) ಎಂದು ಗುರುತಿಸಲಾಗಿದೆ.
ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೇಕ್ಸ್ ಹತ್ತಿರ ಟವೇರಾ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವುದರ ಕುರಿತು ಬಂದ ಖಚಿತ ಮಾಹಿತಿಯಂತೆ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರು ಕಾಪು ಠಾಣಾ ಪಿ.ಎಸ್.ಐ. ರಾಜಶೇಖರ ಬಿ.ಸಾಗನೂರ್ ಹಾಗೂ ಅಧಿಕಾರಿ ಸಿಬ್ಬಂದಿಯವರೊಂದಿಗೆ ಕಾಪು ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೇಕ್ಸ್ ಸಮೀಪ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ ಸುಮಾರು 1 ಕೆ.ಜಿ. 161 ಗ್ರಾಂ ತೂಕದ ಗಾಂಜಾ ಎರಡು ಮೊಬೈಲ್ ನಗದು 18,600/-ರೂ, ವೆಯಿಂಗ್ ಮೆಷಿನ್ ಮತ್ತು ಗಾಂಜಾ ಮಾರಾಟಕ್ಕೆ ಉಪಯೋಗಿಸುವ ಸೊತ್ತುಗಳನ್ನು,ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 2,24,600/- ಆಗಿದೆ.
ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸದ್ರಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ನಿರ್ದೇಶನದಲ್ಲಿ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಭರತ್ ರೆಡ್ಡಿಯವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್, ಕಾಪು ಠಾಣಾ ಪಿ.ಎಸ್.ಐ. ರಾಜಶೇಖರ್ ಬಿ ಸಾಗನೂರ್, ಪಿ.ಎಸ್.ಐ. ಐ.ಆರ್.ಗಡ್ಡೇಕರ್, ಪ್ರೊಬೇಷನರಿ ಪಿ.ಎಸ್.ಐ. ಅನಿಲ್ ಬಿ.ಎಮ್. ಹೆಚ್.ಸಿ. ನಾರಾಯಣ, ಹೆಚ್.ಸಿ. ರವಿಕುಮಾರ್, ಹೆಚ್.ಸಿ. ಮಹಾಬಲ ಶೆಟ್ಟಿಗಾರ್, ಹೆಚ್.ಸಿ. ಮಹಮ್ಮದ್ ರಫೀಕ್, ಪಿ.ಸಿ. , ಸಂದೇಶ, ಪಿ.ಸಿ. , ಆನಂದ, ಪಿ.ಸಿ. , ಅರುಣ ಕುಮಾರ್ ಪಿ.ಸಿ. , ಪರಶುರಾಮ ಪಿ.ಸಿ. ರಾಘವೇಂದ್ರ ರವರುಗಳು ಭಾಗವಹಿಸಿರುತ್ತಾರೆ.