ಉದ್ಯಾವರದ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಯತ್ನ – ಇಬ್ಬರ ಬಂಧನ
ಉಡುಪಿ: ಉದ್ಯಾವರದ ಕೆನರಾ ಬ್ಯಾಂಕ್ ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಣ್ಣೂರು ಪಡೀಲ್ ನಿವಾಸಿ ಮೊಹಮ್ಮದ್ ಯಾಸೀನ್ (21) ಹಾಗೂ ಮಂಜನಾಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್(24) ಎಂದು ಗುರುತಿಸಲಾಗಿದೆ.
ಫೆಬ್ರವರಿ 12 ರಂದು ಬೆಳಿಗ್ಗೆ ಸುಮಾರು 2.40 ಗಂಟೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಉದ್ಯಾವರ ಕೆನರಾ ಬ್ಯಾಂಕ್ ATM ಪ್ರವೇಶಿಸಿ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2025 ಕಲಂ 331(4), 305, 62 BNS ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಕಾಪು ವೃತ್ತ ನಿರೀಕ್ಷಕಿಯಾದ ಜಯಶ್ರೀ ಎಸ್ ಮಾನೆ, ಪಡುಬಿದ್ರಿ ಠಾಣೆಯ ಪಿಎಸ್ಐ ರವರಾದ ಅನಿಲ್ ಕುಮಾರ್ ಟಿ ನಾಯ್ಕ್ , ಕಾಪು ಠಾಣೆಯ ಪಿಎಸ್ಐ ರಮೇಶ್ ನಾಯ್ಕ್, ಹಾಗೂ ಕಾಪು ಠಾಣೆಯ ಸಿಬ್ಬಂದಿಯವರಾದ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎ ಎಸ್ ಐ ರಾಜೇಶ್, ಸಿಬ್ಬಂದಿಯವರಾದ ಸಂದೇಶ, ಶಿರ್ವ ಠಾಣೆ ಸಿಬ್ಬಂದಿಯರಾದ ಸಿದ್ದರಾಯ, ಜೀವನ್ ರವರ ತಂಡ ಮಂಗಳೂರು ಬಂದರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿರುವ KA-19-HQ-7717 ನಂಬ್ರದ ಸ್ಕೂಟಿ, ಜಾಕೆಟ್-1, ಹೆಲ್ಮೆಟ್-1, ಕ್ಯಾಪ್-1, ಹ್ಯಾಂಡ್ ಗ್ಲೌಸ್-1ಜೊತೆ, ಕತ್ತಿ-1, ಹ್ಯಾಮರ್- 1 ಹಾಗೂ ಬ್ಯಾಗ್ -1 ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.