ಉದ್ಯಾವರ: ಪತ್ನಿಯ ನಿಧನದ ಬೆನ್ನಲ್ಲೇ ಸಾವಿನ ಮನೆಯ ಕದ ತಟ್ಟಿದ ಪತಿ

Spread the love

ಉದ್ಯಾವರ: ಪತ್ನಿಯ ನಿಧನದ ಬೆನ್ನಲ್ಲೇ ಸಾವಿನ ಮನೆಯ ಕದ ತಟ್ಟಿದ ಪತಿ

ಉಡುಪಿ: ಪತ್ನಿ ಮೃತಪಟ್ಟ ಒಂದು ದಿನದಲ್ಲೇ ಅವರ ಪತಿ ಕೂಡ ಮೃತಪಟ್ಟ ಘಟನೆ ಉದ್ಯಾವರದಲ್ಲಿ ಸಂಭವಿಸಿದೆ.

ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಲಾರೆನ್ಸ್ ಡೆಸಾ ಹಾಗೂ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಮೃತಪಟ್ಟವರು.

ಲಾರೆನ್ಸ್ ಡೆಸಾ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಅಸೌಖ್ಯದಿಂದಾಗಿ ಮನೆಯಲ್ಲೇ ಮೃತಪಟ್ಟಿದ್ದರು. ಅದರ ಬೆನ್ನಲ್ಲೆ ಪತಿ ಲಾರೆನ್ಸ್ ಡೆಸಾ ಕೂಡ ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲಾರೆನ್ಸ್ ಡೆಸಾ ಅವರು ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯರಾಗಿದ್ದು ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಪತ್ನಿ ಶಿಕ್ಷಿಕಿ ಜುಲಿಯಾನಾ ಡೆಸಾ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು.

ಮೃತರು ಪುತ್ರ, ಹಾಗೂ ಪುತ್ರಿಯನ್ನು ಹಾಗೂ ಅಪಾರು ಬಂಧು ವರ್ಗವನ್ನು ಅಗಲಿದ್ದಾರೆ.


Spread the love