ಉಡುಪಿ: ಉದ್ಯಾವರದ ಗುಡ್ಡೆಯಂಗಡಿ 1ನೇ ಅಡ್ಡರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಮೀಸಲಿರಿಸಿದ್ದ 6 ಲಕ್ಷ ರೂ.ಗಳ ಅನುದಾನವನ್ನು ಗ್ರಾಮಸ್ಥರ ಬೇಡಿಕೆಯಂತೆ 11 ಲಕ್ಷಕ್ಕೇರಿಸಿ ಇನ್ನಷ್ಟು ವಿಸ್ತರಿಸಲು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಅವರು ಸೂಚನೆ ನೀಡಿದರು.
ಮೇ 18ರಂದು ಉದ್ಯಾವರ ಮತ್ತು ಕಟಪಾಡಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಜನರ ಅಹವಾಲುಗಳನ್ನು ಆಲಿಸಿದರಲ್ಲದೆ, ಜನರ ಬೇಡಿಕೆಗೆ ತಕ್ಷಣವೇ ಸ್ಪಂದಿಸಿದರು.
ಸರ್ಕಾರಿ ಗುಡ್ಡೆ ಮೂಡಬೆಟ್ಟುವಿನ ಆರೋಗ್ಯ ಕೇಂದ್ರದ ಬಳಿ 15 ಲಕ್ಷ ರೂ. ವೆಚ್ಚದ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಮೀರಾ ಡಿ ಸೋಜಾ, ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಸರಸ್ವತಿ ಬಂಗೇರ, ಶೇಖರ್ ಅಂಚನ್, ಪಿಡಿಒ ಇಸ್ಮಾಯಿಲ್, ಅಪ್ಪು ಶೆಟ್ಟಿ, ಉದಯ ಶೆಟ್ಟಿ ಉಪಸ್ಥಿತರಿದ್ದರು.
ರಸ್ತೆಗಳು ಸಂಪರ್ಕಕ್ಕೆ ಅಗತ್ಯ ಕೊಂಡಿಗಳಾಗಿದ್ದು ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು. ಉದ್ಯಾವರ ಎಪಿಎಂಸಿಯಡಿ ಮೇಲ್ಪೇಟೆ ಬಯಲು ಜೆಡ್ಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 15 ಲಕ್ಷ ರೂ., ವಾರಾಹಿಯಡಿ ಉದ್ಯಾವರ ಪಿತ್ರೋಡಿ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ., ಉದ್ಯಾವರ ಸಂಪಿಗೆ ನಗರ ಬೊಬ್ಬರ್ಯಜಿಡ್ಡ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ., ಉದ್ಯಾವರ ವೇಗಸ್ ಕಾಲನಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂ.ಗಳನ್ನು ಮೀಸಲಿರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಕುಮಾರ್, ರಿಯಾಜ್ ಪಳ್ಳಿ, ಕಿರಣ್ ಕುಮಾರ, ದಿವಾಕರ್ ಬೊಳ್ಳ, ಮಿತೇಶ್ ಕುಮಾರ್, ದಿನೇಶ್ ಜತ್ತನ್, ಮೀರಾ, ಪಿಡಿಒ ಸುಮನ, ಲಾರೆನ್ಸ್ ಡೇಸಾ, ಉದ್ಯಾವರ ನಾಗೇಶ್ ಕುಮಾರ್, ಪುಷ್ಪಾ, ಕಿರಣ್ ಕುಮಾರ್, ಸುಗಂಧಿ ಶೇಖರ್, ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.