ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ – ನಳೀನ್ ಕುಮಾರ್ ಸೂಚನೆ  

Spread the love

ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ – ನಳೀನ್ ಕುಮಾರ್ ಸೂಚನೆ  

ಮಂಗಳೂರು :ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗರಿಷ್ಠ ಆಸ್ತಿ ನಿರ್ಮಾಣದ ಜೊತೆಗೆ ಅರ್ಹರಿಗೆ ಕೆಲಸ ಕೊಡಿ ಎಂದು ಲೋಕಸಭಾ ಸದಸ್ಯರು ಹಾಗೂ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದ.ಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರತೀ ತಾಲೂಕುವಾರು ಮಾಹಿತಿ ಸಂಗ್ರಹಿಸಿದ ಅವರು, ಸುಳ್ಯ ತಾಲೂಕು ಉಳಿದ ತಾಲೂಕುಗಳಿಗಿಂತ ಹಿಂದಿದ್ದು ಸಾಧನೆ ದಾಖಲಿಸಬೇಕು ಎಂದರು.

ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವಸತಿ ಯೋಜನೆಗಳ ವಿಸ್ತøತ ಪರಿಶೀಲನೆ ನಡೆಸಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸು ನೀಡಲು ಸೂಚಿಸಿದರು. ರೈಲ್ವೇ ಮತ್ತು ಮಹಾನಗರಪಾಲಿಕೆ ಸಮನ್ವಯದಿಂದ ಜನಪರವಾಗಿ ಕಾಮಗಾರಿ ಕೈಗೆತ್ತಿಕೊಂಡು ಸಂಪೂರ್ಣಗೊಳಿಸಿ ಎಂದ ಅವರು, ರೈಲ್ವೇ ಹಾದಿಯಲ್ಲಿ ಬರುವ ಒಳಚರಂಡಿ ಮತ್ತು ನೀರು ಸರಬರಾಜಿನ ಬಗ್ಗೆ ಎಚ್ಚರಿಕೆ ವಹಿಸಿ ಜನರಿಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದರು.

ಬಂಟ್ವಾಳ ಶಾಸಕ ರಾಜೇಶ ನಾೈಕ್ ಮಾತನಾಡಿ, ಜಿಲ್ಲೆಯ ಬ್ಯಾಂಕು ಅಧಿಕಾರಿಗಳು ಮುದ್ರಾ ಯೋಜನೆಯಡಿ ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಮುದ್ರಾ ಯೋಜನೆಯಲ್ಲಿ ಕೃಷಿಗೆ ಪೂರಕವಾದ ಉದ್ದಿಮೆಗಳಿಗೆ ಸಾಲ ಸೌಲಭ್ಯ ಒದಗಿಸ ಬೇಕಿದೆ ಎಂದು ಸಭೆಯ ಗಮನಸೆಳೆದರು.

ಈ ಸಂಬಂಧ ಈಗಾಗಲೇ ಬ್ಯಾಂಕು ಅಧಿಕಾರಿಗಳ ಸಭೆಯಲ್ಲಿ ಅಗ್ರೋ ಸಂಬಂಧಿ ಉದ್ದಿಮೆಗಳಿಗೂ ಆದ್ಯತೆಯಲ್ಲಿ ಸಾಲ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಜೊತೆ ಮತ್ತೊಂದು ಸಭೆ ಕರೆದು ಮುದ್ರಾ ಸಾಲ ನಿರಾಕರಿಸುವ ವೇಳೆ ಹಿಂಬರಹ ನೀಡಲು ಸಂಸದರು ಸೂಚಿಸಿದರು.

ದಕ್ಷಿಣ ಕನ್ನಡದ ಬ್ಯಾಂಕುಗಳು ಮುದ್ರಾ ಮತ್ತು ಕೃಷಿ ಸಂಬಂಧಿ ಉದ್ದಿಮೆಗಳಿಗೆ ನೀಡಿರುವ ಸಾಲ ಸೌಲಭ್ಯದ ಕುರಿತು ನಬಾರ್ಡ್‍ನಿಂದ ವರದಿ ಪಡೆಯಲಾಗುವುದು. ಮುದ್ರಾ ಯೋಜನೆಯಡಿಯಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆಗೆ ಬ್ಯಾಂಕುಗಳು ನೀಡಿರುವ ಸಾಲ ಸೌಲಭ್ಯದ ಮಾಹಿತಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸಭೆಗೆ ತಿಳಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕಠಿಣ ನಿರ್ಬಂಧ ಹೇರದೆ ಜನಪರ ನಿಲುವು ಕೈಗೆತ್ತಿಕೊಳ್ಳಿ ಈ ಸಂಬಂಧ ಸ್ವಚ್ಛ ಭಾರತ್ ಮಿಷನ್ ನೆರವನ್ನು ಪಡೆದುಕೊಳ್ಳಿ; ಈ ಸಂಬಂಧ ಪ್ರತ್ಯೇಕವಾಗಿ ಸಿಇಒ ಜೊತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳಿಂದ ಶೌಚಾಲಯ ವಂಚಿತ ಕುಟುಂಬಗಳ ಮಾಹಿತಿ ಸಂಗ್ರಹಿಸಬೇಕು. ಮಾಹಿತಿ ಸಂಗ್ರಹಿಸಲು ನವೆಂಬರ್ ಕೊನೆಯ ತನಕ ಅವಕಾಶ ಮಾಡಿಕೊಡಲಾಗಿದೆ. ಸ್ವಚ್ಛ ಭಾರತ ಮಿಷನ್ ಘಟಕ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಾರ್ಯನಿರ್ವಾಹಕ ಅಧಿಕಾರಿಗಳು ಸಮಗ್ರ ಮಾಹಿತಿ ನೀಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಕುಟುಂಬಗಳಿಗೆ ಶೌಚಾಲಯ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಸ್ವಚ್ಛ ಭಾರತ ಮಿಷನ್‍ಗೆ ಪೂರಕವಾಗಿ ಕರ್ತವ್ಯ ನಿರ್ವಹಿಸ ಬೇಕು ಎಂದು ಸಂಸದರು ಹೇಳಿದರು.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಭತ್ತದ ಬಿತ್ತನೆ ಸಂಬಂಧ 647 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು. ರಾಷ್ಟ್ರೀಯ ಆಹಾರ ಭದ್ತತಾ ಯೋಜನೆಯಡಿ 20.28ಲಕ್ಷ ಅನುದಾನ ಬಿಡುಗಡೆಯಾಗುದ್ದು, 3.13 ಲಕ್ಷ ಖರ್ಚು ಮಡಲಾಗಿದೆ ರಾಷ್ಟ್ರೀೀಯ ಆಹಾರ ಭದ್ರತಾ ಯೋಜನೆ (ದ್ವಿದಳ ಧಾನ್ಯದಡಿ) 12.67 ಲಕ್ಷ ಅನುದಾನ ಬಿಡುಗಡೆಯಾಗಿದ್ದು 0.7644 ಲಕ್ಷ ಖರ್ಚಾಗಿದೆ. ಲಘು ನೀರಾವರಿಯಡಿ 0.88 ಲಕ್ಷ ಖರ್ಚು ಮಾಡಲಾಗಿದ್ದು ಸ್ಪ್ರಿಂಕ್ಲರ್ ಸೆಟ್‍ಗಳ ವಿತರಣೆ 90% ರ ಸಹಾಯಧನದಲ್ಲಿ ನೀಡಲಾಗಿದೆ 23,400 ಹೆಕ್ಟೇರ್ ಭತ್ತದ ಬಿತ್ತನೆಯಾಗಿದ್ದು ಜಯಾ, ರಾಶಿ ತಳಿ ಬೀಜಗಳನ್ನು ಬಳಸಿಕೊಳ್ಳಲಾಗಿದೆ. ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನಲ್ಲಿ ಭತ್ತದ ಬೆಳೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಾಗಿದೆ. ತೋಟಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದ ಸಂಸದರು ಹಳದಿರೋಗ, ಮರ್ಕಂಜದಲ್ಲಿ ಕಂಡುಬಂದ ಹುಳರೋಗ, ತೆಂಗುಬೆಳೆಗೆ ನೀಡಿದ ಸಹಾಯಧನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜಿಲ್ಲೆಯ ರಸ್ತೆ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಕೈಗೊಂಡ ಪ್ರಗತಿ ವರದಿಯನ್ನು ಪಡೆದರು.

ಮೆಸ್ಕಾಂ ಇಲಾಖೆ ಡಿಸೆಂಬರ್ ಒಳಗೆ ದೀನ್ ದಯಾಳ್ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ನಿಗದಿತ ಗುರಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಆರ್.ಸೆಲ್ವಮಣಿ ಉಪಸ್ಥಿತರಿದ್ದರು.


Spread the love