ಉಪ್ಪೂರು ಜಿ.ಟಿ.ಟಿ.ಸಿ. ಕಾಲೇಜು ನನ್ನ ಸಾಧನೆ ಹೊರತು ಸಂಸದೆ ಶೋಭಾರದ್ದಲ್ಲ – ಪ್ರಮೋದ್ ಮಧ್ವರಾಜ್
ಉಡುಪಿ: ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯಾರೋ ಮಾಡಿದ ಸಾಧನೆಯನ್ನು ತಾನು ಮಾಡಿದ್ದು ಎಂದು ಹೇಳಿಕೊಂಡದ್ದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಶನಿವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ನನ್ನ ಅವಧಿಯಲ್ಲಿ ನನ್ನ ಪ್ರಯತ್ನದಿಂದ ಉಪ್ಪೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಉಪಕರಣಗಾರ ತರಬೇತಿ ಕೇಂದ್ರಕ್ಕೆ ಭೇಟಿ ಮಾಡಿ ಕೇಂದ್ರ ಸರಕಾರದ ಸಾಧನೆ ಎಂದು ಹೇಳಿಕೊಂಡು ಉಡುಪಿ ಶಾಸಕ ಟ್ವೀಟ್ ಮಾಡಿಕೊಂಡಿದ್ದು ಸತ್ಯಕ್ಕೆ ದೂರವಾಗಿದೆ. ತಾನು ಶಾಸಕನಾದ ಬಳಿಕ 2013ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪಿಜಿ ಸೆಂಟರ್ ಬೆಳಪುವಿಗೆ ವರ್ಗಾವಣೆಗೊಂಡಾಗ ರಘಪತಿ ಭಟ್ ನನ್ನ ವಿರುದ್ದ ಆರೋಪ ಮಾಡಿದ್ದರು.
ಆಗ ನಾನು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರವಾಗಲಿ ಎಂಬ ನಿಟ್ಟಿನಲ್ಲಿ ಅಂದಿನ ಸಣ್ಣಕೈಗಾರಿಕೆ ಸಚಿವರಾದ ಸತೀಶ್ ಜಾರಕಿ ಹೊಳಿ ಮತ್ತು ಪ್ರಕಾಶ್ ಹುಕ್ಕೆರಿಯವರಲ್ಲಿ ವಿನಂತಿ ಮಾಡಿ ಉಪ್ಪೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 5 ಎಕ್ರೆ ಜಾಗದಲ್ಲಿ ಸರ್ಕಾರಿ ಉಪಕರಣಗಾರ ತರಬೇತಿ ಕೇಂದ್ರಕ್ಕೆ ಮಂಜೂರಾತಿ ಕೊಟ್ಟು ರೂ 48 ಕೋಟಿ ಹಣವನ್ನು ನಬಾರ್ಡ್ ಮೂಲಕ ಮಂಜೂರಾತಿ ಕೊಡಿಸಿದ್ದೆ. ಇದರ ಮೂಲಕ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಚೀಪ್ ರಾಜಕಾರಣಿ ಎಂದು ಕರೆದಿದ್ದಾರೆ ಆದರೆ ಅವರ ಅವಧಿಯು ರಾಜ್ಯದಲ್ಲಿ ಸುವರ್ಣಯುಗ ಆಗಿತ್ತು ಎನ್ನುವುದು ಶೋಭಾ ಮರೆತಿದ್ದಾರೆ. ಉಪ್ಪೂರಿನಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಉಪಕರಣಗಾರ ತರಬೇತಿ ಕೇಂದ್ರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ನಯಾಪೈಸೆ ಹಣ ನೀಡದೇ ಹೋದರೂ ಕೂಡ ಯಾರೋ ಮಾಡಿದ ಕೆಲಸವನ್ನು ತಾನು ಮಾಡಿದ ಕೆಲಸ ಎಂದು ಹೇಳಿಕೊಳ್ಳುತ್ತಿದ್ದಾರೆ ಇದರು ನಾಚಿಕೆಗೇಡಿನ ಸಂಗತಿಯಾಗಿದೆ. ಸದ್ಯ ಉಪ್ಪೂರು ಸರಕಾರಿ ಪ್ರೌಢ ಶಾಲೆಗೆ ಕ್ರೀಡಾಂಗಣದ ಕೊರತೆಯಿದ್ದು ಸಂಸದೆ ಶೋಭಾ ಮತ್ತು ಶಾಸಕ ರಘುಪತಿ ಭಟ್ ಅವರು ತಲಾ ರೂ10 ಲಕ್ಷ ಅನುದಾನ ಬಿಡುಗಡೆ ಮಾಡಲಿ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಜನಾರ್ದನ ಭಂಡಾರ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.