ಉಪ ಚುನಾವಣೆಯಲ್ಲಿ ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ- ಶೋಭಾ ಕರಂದ್ಲಾಜೆ
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಗೂಂಡಾ ರಾಜಕಾರಣ ಶಿರಾ, ಆರ್ ಆರ್ ನಗರ ವಿಧಾಸಭಾ ಉಪ ಚುನಾಣೆಯಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಬೆಂಗಳೂರಿನ ರಾಜರಾಜೇಶ್ವರಿ ನಗರ, ಶಿರಾ ಉಪ ಚುನಾವಣೆಯಲ್ಲಿ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಆದರೆ, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರದಲ್ಲಿ ಡಿಕೆಶಿ ಸಹೋದರರು ಗೂಂಡಾಗಳನ್ನು ಬಳಸಿಕೊಂಡು ಕಾನೂನು ವ್ಯವಸ್ಥೆ ಹದಗೆಡಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದರು.
ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸುತ್ತಿದೆ ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿರುವಾಗಲೂ ಕಾಂಗ್ರೆಸ್ ನಾಯಕರು ಬಡಿದಾಟ ಮಾಡುತ್ತಾರೆ ಇದು ಕಾಂಗ್ರೆಸ್ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹಾಗಾಗಿ ಅವರ ಗುದ್ದಾಟ ಬಿಜೆಪಿ ಮೇಲೆ ಏನು ಪರಿಣಾಮ ಬೀರುವುದಿಲ್ಲ ಎಂದರು.
ಬಿಹಾರದ ಜನತೆಗೆ ಉಚಿತ ಕೊರೋನಾ ಲಸಿಕೆ ಚುನಾವಣಾ ಪ್ರಣಾಳಿಕೆ ವಿಚಾರವಾಗಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಸಮರ್ಥಸಿಕೊಂಡ ಶೋಭಾ ಕರಂದ್ಲಾಜೆ, ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ನಮ್ಮ ಗುರಿ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಹೀಗಾಗಿಯೇ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿರುವುದರಲ್ಲಿ ತಪ್ಪಿಲ್ಲ. ಆದಷ್ಟು ಬೇಗ ರಾಜ್ಯದ ಜನರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದರು.
ಇನ್ನು, ಪ್ರತೀವರ್ಷದಂತೆ ಈ ಬಾರಿಯೂ ಅವರು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಉಪಾಹಾರ ವ್ಯವಸ್ಥೆ ಮಾಡಿ ತಾವೇ ನಿಂತು ಉಪಹಾರ ಬಡಿಸಿದರು.