ಉಳಿಕೆ ಆಹಾರ ಹಸಿದವರಿಗೆ ನೀಡಲು ಅಕ್ಟೋಬರ್ 11 ರಿಂದ ಉಡುಪಿ ಹೆಲ್ಪ್ ಲೈನ್ ಆರಂಭ
ಉಡುಪಿ: ನಗರದ ಹೋಟೆಲ್ ಮತ್ತು ಸಭಾಂಗಣದಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗುವುದೇ ಹೆಚ್ಚು. ಈ ನಿಟ್ಟಿನಲ್ಲಿ ಸಮಾರಂಭಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದೇ ಹಸಿದವರಿಗೆ ತಲುಪಿಸುವ ಸದುದ್ದೇಶದಿಂದ ಯುವಕರ ‘ಉಡುಪಿ ಹೆಲ್ಪ್ ಲೈನ್’ ವಾಟ್ಸಾಪ್ ಗುಂಪೊಂದು ಕಾರ್ಯಪ್ರವೃತ್ತವಾಗಿದ್ದು ಈ ಯುವಕರು ಸಾಮಾಜಿಕ ಜಾಲತಾಣದ ಮೂಲಕ ಹೀಗೂ ಸಮಾಜಸೇವೆ ಮಾಡಬಹುದು ಎಂದು ತೋರಿಸ ಹೊರಟಿದ್ದಾರೆ.
ಉಡುಪಿ ಹೆಲ್ಪ್ ಲೈನ್ ಇದರ ಅಧಿಕೃತ ಉದ್ಘಾಟನಾ ಸಮಾರಂಭ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಗುರುವಾರ ಅಕ್ಟೋಬರ್ 11 ರಂದು ನಡೆಯಲಿದೆ ಎಂದು ಸಂಘಟನೆಯ ಮಾಧ್ಯಮ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನೂತನ ಪರಿಕಲ್ಪನೆಗೆ ನಾಂದಿ ಹಾಡಿದ್ದು ‘ಉಡುಪಿ ಹೆಲ್ಪ್ಲೈನ್’ ಎಂಬ ವಾಟ್ಸಾಪ್ ಗುಂಪಿನ ಕಲ್ಯಾಣಪುರದ ರಫೀಕ್, ಮೂಳೂರಿನ ಫಹಾದ್, ಹೂಡೆಯ ಮಹೇಶ್ ಪೂಜಾರಿ ಸೇರಿದಂತೆ ಸದಸ್ಯರು. ಸಭೆ, ಸಮಾರಂಭಗಳಲ್ಲಿ ಊಟ ಉಳಿದರೆ ಕಸದ ತೊಟ್ಟಿಗೆ ಎಸೆಯಬೇಡಿ, ನಮಗೆ ಕರೆ ಮಾಡಿ ಹಸಿದವರಿಗೆ ತಲುಪಿಸುವ ಕೆಲಸ ನಮ್ಮದು ಎಂಬ ಬರಹದ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಯುವಕರ ಗುಂಪಿಗೆ ಮದುವೆ ಹಾಲ್, ಸಭಾಂಗಣಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಊಟ ಉಳಿದರೇ ಮಾಹಿತಿ ಕೊಡಿ ತೆಗೆದುಕೊಂಡು ಹೋಗಲು ನಾವೆ ಬರುತ್ತೇವೆ ಎನ್ನುತ್ತದೆ ಈ ಗುಂಪು. ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಊಟ ಉಳಿದಿರುವ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಲಭಿಸಿದರೆ, ತಕ್ಷಣ ವಾಹನದೊಂದಿಗೆ ತೆರಳಿ, ಶುದ್ಧ ಊಟವನ್ನು ಜಿಲ್ಲೆಯ ವಿವಿಧ ವಿಶೇಷ ಮಕ್ಕಳ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುವುದು. ತಂಡವು ಈಗಾಗಲೇ ಶಿರ್ವ, ಉಡುಪಿ, ಕಲ್ಯಾಣಪುರ ಸೇರಿದಂತೆ ಹಲವು ಕಡೆಗಳಲ್ಲಿರುವ ವಿವಿಧ ಸಂಸ್ಥೆ, ಶಾಲೆಗಳನ್ನು ಸಂಪರ್ಕಿಸಿ ಚರ್ಚೆ ನಡೆಸಿದೆ.
ಉಳಿಕೆ ಆಹಾರ ಸಂಗ್ರಹ ಮಾಡಲು ಒಟ್ಟು 150 ಪಾತ್ರೆಗಳ ಅಗತ್ಯವಿದೆ. ಹಾಲ್ಗಳಿಂದ ಊಟ ತೆಗೆದುಕೊಂಡು ಇನ್ನೊಂದು ಕಡೆಗೆ ಪೂರೈಸಬೇಕಾದರೆ ವಿವಿಧ ಬಗೆಯ ಪಾತ್ರೆಗಳ ಅವಶ್ಯಕತೆ ಇದ್ದು, ನಮ್ಮದೆ ವಾಟ್ಸಾಪ್ ಗ್ರೂಪಿನ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಪಾತ್ರೆಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಆಹಾರವನ್ನು ಶೇಖರಿಸಿ ಇಡಲು ಮತ್ತು ಆಹಾರವನ್ನು ತಲುಪಿಸಲು ತಂಡಕ್ಕೆ ಪಾತ್ರೆಗಳು ಮತ್ತು ವಾಹನದ ಅಗತ್ಯವಿದೆ. ಮಾತ್ರವಲ್ಲದೆ ಸಭೆ ನಡೆಸಲು ಕಚೇರಿ, ಆಹಾರ ಶೇಖರಿಸಿ ಇಡಲು ಮನೆ ಮತ್ತು ರೆಫ್ರೀಜರೇಟರ್ ಅಗತ್ಯವಿದ್ದು ಘಟಕದ ಸದಸ್ಯರು ಉದ್ಯೋಗದಲ್ಲಿ ಇರುವುದರಿಂದ ದೊಡ್ಡ ಮೊತ್ತ ಸಂಸ್ಥೆಗೆ ನೀಡಲು ಕಷ್ಟವಾಗುವುದರಿಂದ ದಾನಿಗಳ ಸಹಾಯವನ್ನು ಯಾಚಿಸುತ್ತಿದ್ದೇವೆ ಎಂದರು.
ಸಂಸ್ಥೆಯ ಅಧ್ಯಕ್ಷರಾಗಿ ಮಹೇಶ್ ಹೂಡೆ ಮತ್ತು ಕಾರ್ಯದರ್ಶಿಯಾಗಿ ರಫೀಕ್ ಕಲ್ಯಾಣಪುರ ಮತ್ತು ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಸಂಸ್ಥೆಯ ಗೌರವಾಧ್ಯಕ್ಷರಾಗಿ ಅಮೃತ್ ಶೆಣೈ ಅವರನ್ನು ನೇಮಿಸಲಾಗಿದೆ. ದೇಶದಲ್ಲಿ ಹಸಿವು ಮುಕ್ತವಾಗಬೇಕು ನಾವು ಕಟ್ಟಿದ ಸಂಸ್ಥೆಯನ್ನು ನೋಡಿ ಇತರರು ಕೂಡ ತಮ್ಮ ತಮ್ಮ ಊರುಗಳಲ್ಲಿ ಇಂತಹ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಹ ಜನರಿಗೆ ತಲುಪಲು ನೆರವಾಗಬೇಕು ಎಂಬ ಕನಸನ್ನು ಸಂಸ್ಥೆ ಇಟ್ಟುಕೊಂಡಿದೆ ಎಂದರು.
ಸಂಸ್ಥೆಯ ಉದ್ಘಾಟನೆಯನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕೊ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ, ಮೂರು ಪ್ರಮುಖ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಾದ ಜನಾರ್ದನ ತೋನ್ಸೆ, ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಯೋಗಿಶ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಪೂಜಾರಿ ಹೂಡೆ, ರಫೀಕ್ ಕಲ್ಯಾಣಪುರ, ಅನಿತಾ ಡಿಸೋಜಾ’, ಶಹನವಾಝ್ ಹಾಗೂ ಇತರರು ಉಪಸ್ಥಿತರಿದ್ದರು.
Hats off you guys .