ಉಳ್ಳಾಲ: ಕಾರುಗಳ ಓವರ್ ಟೇಕ್ ಭರಾಟೆಯಲ್ಲಿ ರಸ್ತೆ ದಾಟುತ್ತಿದ್ದ ವೃದ್ಧೆ ಬಲಿ
ಮಂಗಳೂರು: ಎರಡು ಕಾರುಗಳ ನಡುವಿನ ಓವರ್ ಟೇಕ್ ಧಾವಂತಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಅಡಂಕುದ್ರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೃತ ಮಹಿಳೆಯನ್ನು ಚೆಂಬುಗುಡ್ಡೆ ಸೇವಂತಿ ಗುಡ್ಡೆ ನಿವಾಸಿ ಕೃಷ್ಣಪ್ಪ ಶೆಟ್ಟಿಯವರ ಪತ್ನಿ ಬೇಬಿ (65) ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಬೇಬಿ ಅವರು ಅಡಂಕುದ್ರು ಶಾಲೆಯ ಬಳಿ ಅಂಗಡಿಯನ್ನು ನಡೆಸುತ್ತಿದ್ದು ಅಂಗಡಿ ಕೆಲಸದ ಬಳಿಕ ಪಂಪ್ ವೆಲ್ ಸಮೀಪದ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದರು. ಸೋಮವಾರ ಸಂಜೆ ಕೂಡ ಬೇಬಿ ಅವರು ರಾತ್ರಿ ಪಾಳಿ ಕೆಲಸಕ್ಕೆ ತೆರಳಲು ಬಸ್ ಹತ್ತಲು ಹೆದ್ದಾರಿ ದಾಟುತ್ತಿದ್ದ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಬೇಬಿ ಅವರಿಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಯಂತ್ರಣ ತಪ್ಪಿದ ಕಾರು ನೇತ್ರಾವತಿ ಸೇತುವೆ ಬಳಿಯ ಹೆದ್ದಾರಿ ಬಳಿಯ ಕಮರಿಗೆ ಉರುಳಿ ಬಿದ್ದಿದ್ದು ಆ ಕಾರನ್ನು ಓವರ್ ಟೇಕ್ ಮಾಡುತ್ತಿದ್ದು ಇನ್ನೊಂದು ಕಾರು ಸಹ ರಸ್ತೆ ಬದಿಯ ಪೊದೆಗೆ ನುಗ್ಗಿದ್ದು ಇಬ್ಬರು ಚಾಲಕರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ರವಿಶಂಕರ್, ಸಂಚಾರಿ ಎಸಿಪಿ ನಜ್ಮಾ ಫಾರೂಕಿ, ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.