ಉಳ್ಳಾಲ ಘಟನೆ ಸೆಕ್ಷನ್ 144 ಜಾರಿ; ನಾಲ್ವರ ಬಂಧನ

Spread the love

ಮಂಗಳೂರು: ಉಳ್ಳಾಲ ಮುಸ್ಲಿಂ ಯುವಕನ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿ ಸಿಸಿಬಿ ಪೋಲಿಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ ಎಂದು ನಗರ ಪೋಲಿಸ್ ಕಮೀಷನರ್ ಚಂದ್ರಶೇಖರ್ ಹೇಳಿದರು.
ಅವರು ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಧಿತರನ್ನು ತೊಕ್ಕೊಟ್ಟು ನಿವಾಸಿಗಳಾದ ರಾಹುಲ್ (20) ಮತ್ತು ಪವನ್ ರಾಜ್ (20), ಹಾಗೂ ಕೋಟೆಕಾರ ನಿವಾಸಿಗಳಾದ ಎಡ್ವಿನ್ ರಾಹುಲ್ ಡಿ’ಸೋಜಾ (18), ಕಾರ್ತಿಕ್ ಎಂದು ಗುರುತಿಸಲಾಗಿದೆ.
ನಾಲ್ವರು ಆರೋಪಿಗಳು ಕೊಲೆ ಯತ್ನದ ಘಟನೆಯಲ್ಲಿ ನೇರವಾಗಿ ಭಾಗವಹಿಸಿದ್ದು, ಪವನ್ ರಾಜ್ 2015 ರಲ್ಲಿ ಚೆಂಬುಗುಡ್ಡೆಯಲ್ಲಿ ನಡೆದ ಲ್ಯಾನ್ಸಿ ಡಿ’ಸೋಜಾ ಕೊಲೆ ಯತ್ನದಲ್ಲಿ ಕೂಡ ಭಾಗಿಯಾಗಿದ್ದರು. ಮೂರು ತಿಂಗಳ ಹಿಂದಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಇನ್ನೋರ್ವ ಆರೋಪಿ ಕಾರ್ತಿಕ್ 2015 ರಲ್ಲಿ ನಡೆದ ಡಕಾಯತಿ ಕೇಸಿನಲ್ಲಿ ಭಾಗಿಯಾಗಿದ್ದು ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ಎಂದರು.
ಕೆಲವೊಂದು ಕೀಡಿಗೇಡಿಗಳು ಸಾಮಾಜಿಕ ಸ್ವಾಸ್ಥ್ಯ ಹಾಗೂ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದು, ಯಾವುದೇ ರೀತಿಯ ಪರವಾನಿಗೆಯನ್ನು ಹೊಂದದೆ ಪ್ರತಿಭಟನಾ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಮುಂದೆ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಚಂದ್ರಶೇಖರ್, ಮುನ್ನೆಚ್ಚರಿಕಾ ಕ್ರಮವಾಗಿ ಎಪ್ರಿಲ್ 29 ಬೆಳಿಗ್ಗೆ 6 ರಿಂದ ಎ 30 ಸಂಜೆ 6 ರ ತನಕ 144 ಸೆಕ್ಷನ್ ಹಾಕಲಾಗಿದೆ ಎಂದರು


Spread the love