ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ
ಉಳ್ಳಾಲ: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಉಳ್ಳಾಲದ ಸಮುದ್ರ ತೀರ ವಿಹಾರಕ್ಕೆ ತೆರಳಿದ್ದ ಐವರು ಮಹಿಳೆಯರಲ್ಲಿ ನಾಲ್ವರು ಸಮುದ್ರ ಪಾಲಾಗಿದ್ದು ಸ್ಥಳೀಯ ಈಜುಗಾರರು ರಕ್ಷಿಸಿದ್ದು, ಗಂಭೀರಗೊಂಡ ಓರ್ವ ಮಹಿಳೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಬೆಂಗಳೂರು ನಾಯಂಡನ ಹಳ್ಳಿಯ ಸವಿತಾ (38), ಸೌಮ್ಯಾ (39), ಬಿಂದು(20), ಪದ್ಮಿನಿ(38) ಮತ್ತು ಮಂಜುಳ(35) ಎಂಬ ಐವರು ಮಹಿಳೆಯರು ರವಿವಾರ ಬೆಳಿಗ್ಗೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನ ವೇಳೆ ಉಳ್ಳಾಲ ಬೀಚ್ಗೆ ತೆರಳಿದ್ದರು
ಐವರು ಯುವತಿಯರು ಸಮುದ್ರ ತೀರದಲ್ಲಿ ಕುಳಿತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ತೀರಕ್ಕೆ ಅಪ್ಪಳಿಸಿದ್ದು ಸವಿತಾ, ಸೌಮ್ಯ, ಬಿಂದು, ಪದ್ಮಿನಿ ನೀರು ಪಾಲಾಗಿದ್ದಾರೆ. ಕೂಡಲೇ ಸ್ಥಳೀಯ ಈಜುಗಾರರು ನಾಲ್ವರು ಯುವತಿಯರನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪದ್ಮಿನಿ ಸ್ಥಿತಿ ಸ್ವಲ್ಪ ಗಂಭೀರಗೊಂಡಿದ್ದು ಉಳಿದವರು ಚೇತರಿಸಿದ್ದಾರೆ ಎಂದು ತಿಳಿದುಬಂದಿದೆ.