ಎಂಓ-4 ಬಿತ್ತನೆ ಬೀಜದ ಕೊರತೆ ನಿವಾರಣೆಗೆ ಕೆ.ವಿಕಾಸ್ ಹೆಗ್ಡೆ ಆಗ್ರಹ
ಕುಂದಾಪುರ: ತಾಲ್ಲೂಕಿನಾದ್ಯಂತ ಈಗ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಎಂಓ-4 ಬೀಜದ ಕೊರತೆ ಆತಂಕಕ್ಕೆ ಈಡುಮಾಡಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೊರತೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.
ಕೃಷಿ ಇಲಾಖೆಯಲ್ಲಿ ಎಂಓ-4 ಬೀಜದ ಕೊರತೆ ಇದ್ದು, ಎಂಓ-4 ಬೀಜದ ಬೇಡಿಕೆ ಇಡುವ ರೈತರಿಗೆ ಉಮಾ ಹಾಗೂ ಮುಕ್ತಿ ಬೀಜ ಕೊಂಡುಕೊಳ್ಳುವಂತೆ ಹೇಳಲಾಗುತ್ತಿದೆ. ಆದರೆ ಈ ಉಮಾ ಹಾಗೂ ಮುಕ್ತಿ ಬಿತ್ತನೆ ಬೀಜಗಳು ಈ ಭಾಗದ ಮಳೆಗಾಲದ ಭತ್ತದ ಕೃಷಿಗೆ ಉಪಯುಕ್ತ ಬಿತ್ತನೆ ಬೀಜ ಆಗಿರುವುದಿಲ್ಲ ಎನ್ನುವುದು ಅನುಭವಿ ರೈತರ ಅಭಿಪ್ರಾಯವಾಗಿದೆ. ಪಲ್ಗುಣ ತಳಿಯ ನಂತರ ಹಲವಾರು ವರ್ಷಗಳಿಂದ ಕರಾವಳಿಯ ರೈತರು ಇಷ್ಟ ಪಟ್ಟ ತಳಿ ಎಂದರೆ ಅದು ಎಂಓ-4 ಎನ್ನುವುದು ವಾಸ್ತವ ವಿಚಾರ.
ಕೃಷಿ ಕಾರ್ಯದ ಚಟುವಟಿಕೆಗಳು ಆರಂಭವಾಗುವ ಮುನ್ನ, ಈ ಬಾರಿಯ ಕೃಷಿ ಕಾರ್ಯಕ್ಕೆ ರೈತರ ಬೇಡಿಕ ಎಷ್ಟಿದೆ ಎನ್ನುವುದನ್ನುಲೆಕ್ಕಾಚಾರ ಮಾಡಿ, ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಎಂಓ-4 ಬೀಜದ ದಾಸ್ತಾನು ಮಾಡಬೇಕಾಗಿದ್ದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ರೈತರ ಬಹು ಬೇಡಿಕೆಯ ಎಂ ಓ-4 ಬಿತ್ತನೆ ಬೀಜ ಪೂರೈಸುವುದನ್ನು ಬಿಟ್ಟು ತಮ್ಮ ಬಳಿ ಇರುವ ಬಿತ್ತನೆ ಬೀಜ ಕೊಂಡುಕೊಳ್ಳುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿರುವ ಕೆ.ವಿಕಾಸ್ ಹೆಗ್ಡೆ ಅವರು, ಸಂಬಂಧಿತ ಇಲಾಖೆ ಕೂಡಲೇ ರೈತರ ಬಹು ಬೇಡಿಕೆಯ ಎಂ ಓ-4 ಬಿತ್ತನೆ ಬೀಜವನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.