ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆ ಪ್ರಧಾನಿ, ಗೃಹ ಸಚಿವರಿಗೆ ಮನವಿ
ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಮಾಡುತ್ತಿದ್ದ ಪ್ರಯತ್ನಗಳ ಉತ್ತಮ ಫಲವಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದ ನಿಯೋಗವು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಇವರನ್ನು ದೆಹಲಿಯ ಕಛೇರಿಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿತು.
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನಿಯೋಗದ ಪರವಾಗಿ ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರಿಗೆ 8ನೇ ಪರಿಚ್ಛೇದಕ್ಕೆ ಸೇರಿಸಲು ತುಳು ಭಾಷೆಯ ಅರ್ಹತೆ ಮತ್ತು ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತುಳು ಭಾಷೆಯ ಬಗೆಗಿನ ವಿವರವನ್ನು ತಾಳ್ಮೆಯಿಂದ ಆಲಿಸಿದ ಪ್ರಧಾನ ಮಂತ್ರಿಯವರು ಹಾಗೂ ಗೃಹ ಸಚಿವರು ಸಕಾರಾತ್ಮಕ ಸ್ಪಂದನೆಯನ್ನು ನೀಡಿರುತ್ತಾರೆ.
ನಿಯೋಗದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಂ.ಜಾನಕಿ, ಬ್ರಹ್ಮಾವರ, ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾದ ಬಿ. ಸುಬ್ಬಯ್ಯರೈ, ಸಮಾಜ ಸೇವಕರಾದ ಧರ್ಮಸ್ಥಳದ ಶ್ರೀ ಡಿ. ಸುರೇಂದ್ರಕುಮಾರ್, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಡಾ.ವಾಮನ ನಂದಾವರ, ಉಮಾನಾಥ ಎ. ಕೋಟ್ಯಾನ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಯು.ದೇವಾಡಿಗ, ಎ.ಸಿ.ಭಂಡಾರಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ ಮತ್ತು ತುಳು ಅಕಾಡೆಮಿಯರಿಜಿಸ್ಟ್ರಾರ್ ಚಂದ್ರಹಾಸರೈ ಬಿ.ಇವರು ಪಾಲ್ಗೊಂಡಿದ್ದರು.