Home Mangalorean News Kannada News ಎಂಡೋ ಸಂತ್ರಸ್ತರಿಗೆ ಆದ್ಯತೆಯಲ್ಲಿ ಸೌಲಭ್ಯಗಳ ಮಂಜೂರು: ಡಿಸಿ ಸೂಚನೆ ಮ0ಗಳೂರು :

ಎಂಡೋ ಸಂತ್ರಸ್ತರಿಗೆ ಆದ್ಯತೆಯಲ್ಲಿ ಸೌಲಭ್ಯಗಳ ಮಂಜೂರು: ಡಿಸಿ ಸೂಚನೆ ಮ0ಗಳೂರು :

Spread the love

ಎಂಡೋ ಸಂತ್ರಸ್ತರಿಗೆ ಆದ್ಯತೆಯಲ್ಲಿ ಸೌಲಭ್ಯಗಳ ಮಂಜೂರು: ಡಿಸಿ ಸೂಚನೆ

ಮ0ಗಳೂರು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಆದ್ಯತೆಯಲ್ಲಿ ಮಂಜೂರುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಗುರುವಾರ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಕಾರ್ಯನಿರ್ವಾಹಕ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿ ಎಂಡೋ ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರು ವಿವಿಧ ಫಲಾನುಭವಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ತ್ವರಿತಗತಿಯಲ್ಲಿ ಮಂಜೂರು ಮಾಡಬೇಕು. ಅಗತ್ಯ ಬಿದ್ದರೆ ನಿಯಮಗಳ ಸರಳೀಕರಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಎಂಡೋಸಂತ್ರಸ್ತರ ಸೌಲಭ್ಯಗಳ ಮಂಜೂರಾತಿಯಲ್ಲಿ ವಿನಾಕಾರಣ ವಿಳಂಭಿಸಿದರೆ, ಅದನ್ನು ಸಹಿಸಲಾಗದು ಎಂದು ಅವರು ಎಚ್ಚರಿಸಿದರು.

ಅರ್ಹ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಅವರಿಗೆ ಗುರುತಿನ ಚೀಟಿ ಮತ್ತು ಸ್ಮಾರ್ಟ್ ಕಾರ್ಡ್ ನೀಡಿಕೆ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಆಗಸ್ಟ್ ಅಂತ್ಯದೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಖಾಸಗೀ ಆಸ್ಪತ್ರೆಗಳಲ್ಲಿ ಎಂಡೋ ಸಂತ್ರಸ್ತರು ಚಿಕಿತ್ಸೆ ಪಡೆದಿದ್ದರೆ ಆ ವೆಚ್ಚವನ್ನು ಆಸ್ಪತ್ರೆಗಳಿಗೆ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಂಡೋ ಸಂತ್ರಸ್ತರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‍ಗಳನ್ನು ನೀಡಲಾಗುವುದು. ಇದಲ್ಲದೇ, ಶಿಕ್ಷಣ ಇಲಾಖೆ ವತಿಯಿಂದ ಅರ್ಹ ಎಂಡೋಪೀಡಿತ ಮಕ್ಕಳ ಮನೆಗೆ ತೆರಳಿ ವಿಧ್ಯಾಭ್ಯಾಸ ನೀಡಲಾಗುವುದು ಎಂದರು. ಇದಲ್ಲದೆ ಅರ್ಹರಿಗೆ ಮನೆ ನಿವೇಶನ ನೀಡಲು ಸರಕಾರಿ ಜಾಗವನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಅವರು ತಹಶೀಲ್ದಾರ್‍ಗಳಿಗೆ ಸೂಚಿಸಿದರು. ವಸತಿ ಯೋಜನೆಯಡಿ ಮನೆ ನಿರ್ಮಾಣ ಹಾಗೂ ಶೌಚಾಲಯಗಳನ್ನು ಆಯಾ ಗ್ರಾ.ಪಂ.ಗಳು ಆದ್ಯತೆಯಲ್ಲಿ ನೀಡಲು ಅವರು ಸೂಚಿಸಿದರು.

ಎಂಡೋ ಸಂತ್ರಸ್ತರ ಬ್ಯಾಂಕ್ ಖಾತೆಗೆ ಮಾಸಿಕ ಪಿಂಚಣಿ ಜಮಾ ಆಗುವುದರಲ್ಲಿ ವಿಳಂಭವಾಗುವುದುನ್ನು ತಪ್ಪಿಸಲು ಮಂಗಳೂರಿನಲ್ಲಿ ಖಜಾನೆ ಮತ್ತು ವಿವಿಧ ಬ್ಯಾಂಕುಗಳ ಸಭೆ ನಡೆಸಲಾಗುವುದು. ಹಳೇ ಪಿಂಚಣಿ ಬಾಕಿ ಇದವದವರಿಗೆ ಈಗಾಗಲೇ ಹಿಂಬಾಕಿ ಪಾವತಿಸಲಾಗಿದೆ. ಅರ್ಹರಿಗೆ ಪಿಂಚಣಿ ದೊರಕಿಸುವುದು ಸರಕಾರದ ಉದ್ದೇಶವಾಗಿದೆ. ಅನರ್ಹರಿಗೆ ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ ಮಂಜೂರಾಗಿರುವ ಬಗ್ಗೆ ದೂರುಗಳು ಬಂದರೆ ಅಂತಹ ಪಿಂಚಣಿಯನ್ನು ತಡೆ ಹಿಡಿಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪ್ರಸ್ತುತ ಇರುವ ಡೇ ಕೇರ್ ಸೆಂಟರ್‍ಗಳಲ್ಲಿ ಪೂರ್ಣಪ್ರಮಾಣದ ಫಿಸಿಯೋಥೆರಫಿ ಘಟಕಗಳನ್ನು ವಾರದ 6 ದಿನಗಳಲ್ಲೂ ಕಾರ್ಯಾಚರಿಸಲಾಗುವುದು. ಡೇ ಕೇರ್ ಸೆಂಟರ್‍ಗಳ ಉಸ್ತುವಾರಿಗೆ ಸಮಿತಿಯನ್ನು ರಚಿಸಲಾಗುವುದು. ಎಂದು ಡಾ.ಕೆ.ಜಿ. ಜಗದೀಶ ತಿಳಿಸಿದರು. ಎಂಡೋಸಲ್ಫಾನ್ ಸಂತ್ರಸ್ತರ ಎಲ್ಲಾ ಬೇಡಿಕೆಗಳ ಬಗ್ಗೆ ಉನ್ನತ ಮಟ್ಟದ ಸಭೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರವೇ ನಡೆಯಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಪುತ್ತೂರು ಎಸಿ ಡಾ.ರಘುನಂದನ ಮೂರ್ತಿ, ಮಂಗಳೂರು ಎಸಿ ರೇಣುಕಾ ಪ್ರಸಾದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ಅರುಣ್‍ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್‍ಗಳು, ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಸೆಬಾಸ್ಟಿಯನ್, ಎಂಡೋ ಹೋರಾಟಗಾರರ ಸಮಿತಿಯ ಪೀರ್ ಮುಹಮ್ಮದ್ ಸಾಹೇಬ್, ಎಂಡೋ ಸಂತ್ರಸ್ತ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.


Spread the love

Exit mobile version