ಎಂಡೋ ಸಲ್ಫಾನ್ ತೀವ್ರತೆ ಬಗ್ಗೆ ತಜ್ಞರಿಂದ ಪರಿಶೀಲನೆ- ಸಚಿವೆ ಡಾ. ಜಯಮಾಲಾ

Spread the love

ಎಂಡೋ ಸಲ್ಫಾನ್ ತೀವ್ರತೆ ಬಗ್ಗೆ ತಜ್ಞರಿಂದ ಪರಿಶೀಲನೆ- ಸಚಿವೆ ಡಾ. ಜಯಮಾಲಾ

ಉಡುಪಿ: ಎಂಡೋ ಸಲ್ಫಾನ್ ಸಿಂಪಡಣೆ ಆಗಿ 39 ವರ್ಷ ಕಳೆದಿದೆ, ಆದರೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡಿಲ್ಲ, ಹುಟ್ಟುವ ಮಕ್ಕಳೂ ಸೇರಿದಂತೆ ಅನೇಕ ಮಂದಿ ಇನ್ನೂ ಇದರಿಂದ ನರಳುತ್ತಿದ್ದಾರೆ, ಇದಕ್ಕೆ ಕಾರಣರಾದವರ ವಿರುದ್ದ ತಮ್ಮ ತೀವ್ರ ಅಸಮಧಾನ ವ್ಯಕ್ತ ಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ಮಣ್ಣಿ ನಲ್ಲಿ ಮತ್ತು ನೀರಿನಲ್ಲಿ ಬೆರೆತಿರುವ  ಎಂಡೋ ಸಲ್ಪಾನ್ ನ ತೀವ್ರತೆ, ಇನ್ನೂ ಎಷ್ಟು ವರ್ಷ ಇರಬಹುದು ಎಂಬ ಬಗ್ಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ , ನುರಿತ ತಜ್ಞರಿಂದ ಪರಿಶೀಲನೆ ನಡೆಸಿ, ಸಂತ್ರಸ್ಥರ ಸಮಸ್ಯೆಗಳನ್ನು ತಳಮಟ್ಟದಿಂದ ಬಗೆಹರಿಸಲಾಗುವುದು ಎಂದು ಹೇಳಿದರು.

ಅವರು ಶನಿವಾರ, ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ  ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಎಂಡೋ  ಸಲ್ಪಾನ್ ಪೀಡಿತರನ್ನು ಸರಿಯಾಗಿ ಗುರುತಿಸುವ ಕಾರ್ಯ ಆಗಿಲ್ಲ ಎಂಬ ದೂರು ಬರುತ್ತಿದ್ದು, ಎಂಡೋ ಸಿಂಪರಣೆ ಸಮಯದಲ್ಲಿ  ಬೀಸುವ ಗಾಳಿ ಮತ್ತು ಹರಿಯುವ ನೀರಿನಿಂದ ಇದು  ಸಮೀಪದ ಗ್ರಾಮಗಳಿಗೆ ಸಹ ಹರಡಿರುವ ಸಾಧ್ಯತೆಗಳಿದ್ದು,  ಈ ಬಗ್ಗೆ ಎಂಡೋ ಪೀಡಿತ  ಮತ್ತು ಪಕ್ಕದ ಗ್ರಾಮಗಳಲ್ಲಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ನಡೆಸಿ, ಅರ್ಹರನ್ನು ಗುರುತಿಸಿ ಸೌಲಭ್ಯ ವಿತರಿಸಿ, ಎಂಡೋ ಪೀಡಿತವಾಗಿರುವ ಉಡುಪಿ, ಮಂಗಳೂರು, ಉ.ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿರುವ ಎಲ್ಲಾ ಸಂತ್ರಸ್ಥರಿಗೆ ಒದಗಿಬೇಕಾದ ಸೌಲಭ್ಯಗಳ ಕುರಿತಂತೆ 4 ಜಿಲ್ಲೆಗಳ ಜಂಟಿ ಸಭೆ ನಡೆಸುವುದಾಗಿ ತಿಳಿಸಿದ ಡಾ. ಜಯಮಾಲಾ , ಜಿಲ್ಲೆಯ ಎಂಡೋ ಪೀಡಿತರನ್ನು ತಾನೇ ಖುದ್ದಾಗಿ ತೆರಳಿ ವೀಕ್ಷಿಸಿ ಅವರಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ  ಸೂಕ್ತ ಕೌಶಲ್ಯ ತರಬೇತಿ ನೀಡಲು ಪ್ರತ್ಯೇಕ ಘಟಕ ಆರಂಭಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಎಂಡೋ ಪೀಡಿತರ ಶಾಶ್ವತ ಪುರ್ನವಸತಿಗಾಗಿ ನಾಡಾ ಗ್ರಾಮದ ಸೇನಾಪುರದಲ್ಲಿ 5 ಎಕ್ರೆ   ಜಾಗ ಗುರುತಿಸಿರುವ ಬಗ್ಗೆ ಮಾಹಿತಿ ಅಧಿಕಾರಿ ಸಚಿವರು,  ಶಾಶ್ವತ ಪುರ್ನವಸತಿಗೆ ಕನಿಷ್ಠ 10 ಎಕ್ರೆ ಜಾಗ ಮೀಸಲಿಡುವಂತೆ ಮತ್ತು   ದುಬೈ ನಲ್ಲಿ ವಿಕಲಚೇತನರಿಗೆ ಚಕಿತ್ಸೆ ನೀಡುವ  ವಿಶೇಷ ಆಸ್ಪತ್ರೆ ಮಾದರಿಯಲ್ಲಿ,  ಎಲ್ಲಾ ಅತ್ಯಾಧುನಿಕ ಸೌಲಭ್ಯಗಳುಳ್ಳ ಚಿಕಿತ್ಸಾ ಕೇಂದ್ರ ತೆರೆದು, ವಿದೇಶಗಳಲ್ಲಿನ ವೈದ್ಯರ ನೆರವು ಪಡೆದು ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿ, ಈ ಕೇಂದ್ರದ ನಿರ್ಮಾಣಕ್ಕೆ ಅನುದಾನದ ಸಮಸ್ಯೆ ಇಲ್ಲ, ಶೀಘ್ರದಲ್ಲಿ ಸಮಗ್ರ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಎಂಡೋ ಪೀಡಿತರಿಗೆ ನೀಡುವ ಸಾಧನ ಸಲಕರಣೆಗಳನ್ನು ವಿಕಲಚೇತನ ಇಲಾಖೆಯಿಂದ ಒದಗಿಸಲಾಗುವುದು ಎಂದು ಹೇಳಿದರು.

ಎಂಡೋ ಪೀಡಿತರಿಗೆ ನೀಡುವ ಪಿಂಚಣಿಯನ್ನು ಆರ್.ಟಿ.ಜಿ.ಎಸ್ ಮೂಲಕ ನೀಡಲು ಕ್ರಮ ಕೈಗೊಳ್ಳಿ , ಕನಿಷ್ಠ ಪ್ರತಿ 3 ತಿಂಗಳಿಗೊಮ್ಮೆ ಸಮಿತಿಯ ಸಭೆ ಕರೆದು , ಸೌಲಭ್ಯಗಳನ್ನು ವಿತರಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಹೊಸದಾಗಿ ಗುರುತಿಸಿರುವ 15 ಮಂದಿಗೆ ಎಂಡೋ ಪೀಡಿತರಿಗೆ ಸೌಲಭ್ಯ ಒದಗಸುವ ಕುರಿತಂತೆ ಸಚಿವರು ಅನುಮೋದನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ  , ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love