ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ

Spread the love

ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ

ರಾಹುಲ್, ಗೋಪಾಲ್, ರಿತೇಶ್ ಭಟ್ಕಳ್‍ರಿಗೆ ಮುಗಿಬಿದ್ದ ತಂಡಗಳು. ನವೀನ್ 75 ಸಾವಿರ,  ತಾಹಾ 73 ಸಾವಿರ, ಝೀಶನ್ 73 ಸಾವಿರಕ್ಕೆ ಮಾರಾಟ

ಮಂಗಳೂರು: ಅಲ್ಲಿ ತುಂಬಿದ್ದುದು ಕಾತರ- ಕುತೂಹಲದ ಕ್ಷಣಗಳು.   ಮಂಗಳೂರು ಪ್ರೀಮಿಯರ್ ಲೀಗಿನಲ್ಲಿ ಉತ್ತಮವಾದ ತಮ್ಮ ತಂಡವನ್ನು ರೂಪಿಸಬೇಕೆಂಬ ಬಯಕೆಯಿಂದ ತಮ್ಮದೇ ಆದ ರಣತಂತ್ರಗಳೊಂದಿಗೆ ಹನ್ನೆರಡು ತಂಡಗಳು ಮಾಲಕರು, ತಮ್ಮ ತಂಡದ ಕೋಚ್‍ಗಳು, ಸಲಹೆಗಾರರೊಂದಿಗೆ ಎಂಪಿಎಲ್ ಆಟಗಾರರ ಹರಾಜಿನಲ್ಲಿ ನೆರೆದಿದ್ದರು. ಕೆಲವೊಂದು ಐ.ಪಿ.ಎಲ್, ಕೆ.ಪಿ.ಎಲ್ ಆಟಗಾರರಿಗೆ ಇಲ್ಲದೆ ಬೇಡಿಕೆ, ಹಣಾ ಹಣಿ ಮಂಗಳೂರು ವಲಯದ ಸ್ಥಳೀಯ ಆಟಗಾರರಿಗೆ ಇದ್ದಿತು.  ಮಣಿಪಾಲದ ರಾಹುಲ್ ಕೋಟ್ಯಾನ್, ಉಡುಪಿಯ ಗೋಪಾಲ ಶೆಟ್ಟಿ, ರಿತೇಶ್ ಭಟ್ಕಳ್ ಮುಂತಾದ ಆಟಗಾರರನ್ನು ಕೊಳ್ಳಲು ನಿಗದಿ ಪಡಿಸಿದ ಗರಿಷ್ಠ ಬೆಲೆ ರೂ.500000.00 ತಲಪಿದರೂ ತಂಡಗಳ ನಡುವಣ ಹಣಾಹಣಿ ಮುಗಿಯದಿದ್ದಾಗ ರಾಹುಲ್‍ಗೆ 11 , ರಿತೇಶ್‍ಗೆ 10, ಗೋಪಾಲ್‍ಗೆ  6 ತಂಡಗಳು ಬೇಡಿಕೆ ಇಟ್ಟಾಗ  ಅದೃಷ್ಠ ಚೀಟಿ ಎತ್ತುವ ಮೂಲಕ ಅವರು ಅದೃಷ್ಟವಂತ ತಂಡದ ಮಡಿಲನ್ನು ಸೇರಿದರು.

mpl-inauguration

ಈ ವರ್ಷದ ಡಿಸೆಂಬರ್ 17ರಿಂದ 30ರವರೆಗೆ  14 ದಿನಗಳ ಕಾಲ ನವಮಂಗಳೂರು ಬಂದರು ಪಣಂಬೂರಿನ ಬಿ.ಆರ್. ಅಂಬೇಡ್ಕರ್‍ ಕ್ರೀಡಾಂಗಣದಲ್ಲಿ ಕರ್ನಾಟಕ ರೀಜಿನಲ್‍ ಕ್ರಿಕೆಟ್‍ ಅಕಾಡಮಿ, ಮಂಗಳೂರು ಆಯೋಜಿಸಲಿರುವ ಅಲ್‍ಮುಝೈನ್ ವೈಟ್‍ಸ್ಟೋನ್ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟದ ಆಟಗಾರರನ್ನು ಆರಿಸುವ ಸಲುವಾಗಿ ಆಟಗಾರರ ಹರಾಜು ಪ್ರಕ್ರಿಯೆಯು ಮಂಗಳೂರಿನ ಪಾಂಡೇಶ್ವರದ ಫೋರಂ ಪಿಝಾ ಮಾಲಿನಲ್ಲಿ ಜರಗಿತು.  ಅಪರಾಹ್ನ ಮೂರು ಗಂಟೆಗೆ ಆರಂಭವಾದ ಈ ಪ್ರಕ್ರಿಯೆಯು ರಾತ್ರಿ ಒಂದು ಗಂಟೆಯವರೆಗೂ ಮುಂದುವರಿದಿತ್ತು.

ಆರಂಭದಲ್ಲಿ ಕೆಪಿಎಲ್ – ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಲಾಂಛನ (ಐಕಾನ್) ಆಟಗಾರರಲ್ಲಿ ಪ್ರತಿಯೊಂದು ತಂಡವು ಇಬ್ಬರು ಆಟಗಾರರನ್ನು ಖರೀದಿಸುವುದು ಕಡ್ಡಾಯವಾಗಿತ್ತು.  ಈ ಗುಂಪಿನಲ್ಲಿ ಹಲವು ಮಂದಿ ಐಪಿಎಲ್ ಆಟಗಾರರಿದ್ದು ಅವರನ್ನು ಖರೀದಿಸಲು ತಂಡದ ಮಾಲಕರು ಹೆಚ್ಚಿನ ಆಸಕ್ತಿ ತೋರದಿದ್ದುದರಿಂದ ಕಿಶೋರ್ ಕಾಮತ್, ಶಿವಿಲ್ ಕೌಶಿಕ್ ಮುಂತಾದವರಿಗೆ ಎಂಪಿಎಲ್‍ನ ಅಂಕಣದಲ್ಲಿ ಆಡುವ ಅವಕಾಶ ತಪ್ಪಿಹೋಯಿತು. ಇವರಲ್ಲಿ  ಸ್ಥಳೀಯ ಆಟಗಾರ ನವೀನ್ ಎಂ.ಜಿ ರೂ.75000.00 ಕ್ಕೆ ಉಡುಪಿ ತಂಡಕ್ಕೆ ಮಾರಾಟವಾಗಿ ನಿಗಿದಿತ ಅತ್ಯಧಿಕ ಮೊತ್ತವನ್ನು ಪಡೆದ ಆಟಗಾರರಾದರು.  ಮಹಮ್ಮದ್ ತಾಹ ರೂ.73000.00 ದ ಮೊತ್ತಕ್ಕೆ ಕೋಸ್ಟಲ್ ಡೈಜೆಸ್ಟ್ ತಂಡದ ಪಾಲಾದರೆ, ಸಾದಿಕ್ ಕೀರ್ಮಾನಿ  ರೂ.65000ಕ್ಕೆ ಯುನೈಟೆಡ್ ಉಲ್ಲಾಳದ ತೆಕ್ಕೆ ಸೇರಿದರು. ದಿಕಾಂಶು ನೇಗಿ (60 ಸಾವಿರ) ಸ್ಪಾರ್ಕ್ ಎವೆಂಜರ್ಸ್, ಕೆ.ಬಿ. ಪವನ್ (42 ಸಾವಿರ) ಕಾರ್ಕಳ ಗ್ಲೇಡಿಯೇಟರ್ಸ್,  ಸರ್ಫಾಜ್ (36 ಸಾವಿರ) – ಕರಾವಳಿ ವಾರಿಯರ್ಸ್, ನಿಧೀಶ್ ಎಂ (35 ಸಾವಿರ) – ಮ್ಯಾಸ್ಟೋ ಟೈಟನ್, ಚಿರಂಜೀವಿ ಎಸ್ (30 ಸಾವಿರ)- ಕಂಕನಾಡಿ ನೈಟ್‍ರೈಡರ್ಸ್, ರೋಹಿತ್ ಗೌಡ (27 ಸಾವಿರ)- ಕೋಸ್ಟಲ್ ಡೈಜೆಸ್ಟ್ ,  ವೈಶಾಕ್ ವಿಜಯ ಕುಮಾರ್ (26 ಸಾವಿರ)- ಟೀಮ್ ಎಲಿಗೆಂಟ್ ತಂಡಗಳ ಪಾಲು ಸೇರಿದರು.

mpl-inauguration1

ಎ ವಿಭಾಗದಲ್ಲಿದ್ದ ಮಂಗಳೂರು ವಲಯದ 60 ಆಟಗಾರರಲ್ಲಿ ತಲಾ ಐದು ಆಟಗಾರರನ್ನು ಪ್ರತಿಯೊಂದು ತಂಡವು ಖಡ್ಡಾಯವಾಗಿ ಖರೀದಿ ಮಾಡಬೇಕಾಗಿತ್ತು. ಈ ವಿಭಾಗದಲ್ಲಿ ಖರೀದಿಗಾಗಿ ಹೆಚ್ಚಿನ ಪೈಪೋಟಿ ಕಂಡು ಬಂದು ರಾಹುಲ್ ಕೋಟ್ಯಾನ್, ಲಾಲ್ ಸಚಿನ್, ರಿತೇಶ್ ಭಟ್ಕಳ್, ಸಿನಾನ್, ಝಾಹುರ್, ಸಚಿನ್ ಭಟ್ ಮುಂತಾದ ಆಟಗಾರರು ನಿಗದಿತ ಗರಿಷ್ಟ ಬೆಲೆಯಾದ ರೂ.50000.00 ಸಾವಿರಕ್ಕೆ ವಿವಿಧ ತಂಡಗಳನ್ನು ಸೇರಿದರು. ಈ ವಿಭಾಗದಲ್ಲಿ ಸುಹೈಲ್, ಆದಿತ್ಯ ರೈ, ಮನೋಜ್, ಬಿಪಿನ್ ಕೆ.ಪಿ, ಪವನ್ ಗೋಖಲೆ, ನೆಹಾಲ್, ವೃಜೇಶ್, ಮಾಸೂಕ್, ನೆಲ್ಸನ್ ಪಿಂಟೋ, ಗೌರವ್, ವಿಕ್ರಮ್ ಪಿ.ಎಸ್, ಆಸೀಶ್ ಧರ್, ಇಬ್ರಾಹಿಂ ಆತ್ರಾಡಿ ಮುಂತಾದ ಆಟಗಾರರು ರೂ. 20000.00ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾದ ಆಟಗಾರರು.

ಬಿ ವಿಭಾಗದ ಆಟಗಾರರಲ್ಲಿ ಶಿವರಾಜ್‍ರವರು ರೂ.56000.00 ಕ್ಕೆ ಕಂಕನಾಡಿ ತಂಡದ ಪಾಲಾಗಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರಾದರೆ, ರಾಘವೇಂದ್ರ ಕುಲಾಲ್, ಯಶ್ವಿತ್,  ನಿಖಿಲ್ ಕಾಮತ್, ಅಯ್ಯಪ್ಪ, ಅಭಿಲಾಶ್ ಶೆಟ್ಟಿ, ಸತ್ಯಸ್ವರೂಪ್, ಸಯದ್ ಮುತಾಹಿರ್ ಮುಂತಾದ ಆಟಗಾರರು ರೂ.20000.00ಕ್ಕೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾದರು.

ಸಿ ವಿಭಾಗದಲ್ಲಿನ ಆಟಗಾರರಲ್ಲಿ ತಲಾ 6 ಮಂದಿ ಆಟಗಾರರ ಪಟ್ಟಿಯನ್ನು ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಆ ರೀತಿ ತಂಡಗಳು ಸಲ್ಲಿಸಿದ ಪಟ್ಟಿಯಲ್ಲಿ ಒಬ್ಬನೇ ಆಟಗಾರನಿಗೆ ಒಂದಕ್ಕಿಂತ ಹೆಚ್ಚು ತಂಡಗಳು ಬೇಡಿಕೆ ಸಲ್ಲಿಸಿದ್ದ ಸಂದರ್ಭದಲ್ಲಿ ಅಂತಹ ಆಟಗಾರರನ್ನು ಹರಾಜು ಮಾಡಲಾಯಿತು.

ಆರಂಭದಲ್ಲಿ ಜರಗಿದ ಸಭಾ ಸಮಾರಂಭದಲ್ಲಿ ಚಿತ್ರನಟ ಅರ್ಜುನ್ ಕಾಪಿಕಾಡ್‍ರವರು ಮಾತನಾಡಿ ಕ್ರೀಡೆಯು ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಎಲ್ಲರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಎಂ.ಪಿ.ಎಲ್‍ನಂತಹ ಕ್ರೀಡಾ ಕೂಟಗಳು ಹೆಚ್ಚೆಚ್ಚು ಜರಗುವಂತಾಗಬೇಕು ಎಂದರು.  ಬೆಂಗಳೂರಿನ ಚಿತ್ರವಲಯದಲ್ಲೂ ಎಂಪಿಎಲ್ ದಿನ ನಿತ್ಯದ ಮಾತಾಗಿದ್ದು ಕರಾವಳಿಯ ಜನರು ಎಂಪಿಎಲ್ ಅನ್ನು ಬೆಂಬಲಿಸಿ ಒಗ್ಗಟ್ಟಾಗಬೇಕು ಎಂದರು.

ಎಂಪಿಎಲ್‍ನ ನಾಮ ಪ್ರಾಯೋಜಕರಾದ ಅಲ್‍ಮುಝೈನ್ ಕಂಪನಿಯ ಝಾಹಿರ್, ರಿಯಲ್‍ಟೆಕ್ ಸಂಸ್ಥೆಯ ಇಸ್ಮಾಯಿಲ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷ ರತನ್ ಕುಮಾರ್, ಶಶೀಧರ್ ಕೋಡಿಕಲ್, ಪ್ರೆಸಿಡೆಂಟ್ ಗ್ರೂಪಿನ ಸಫ್ತಾರ್ ಮತ್ತು ಇಫ್ತಿಕಾರ್, ಮನ್ಸೂರ್,ಯಶ್‍ಪಾಲ್ ಸುವರ್ಣ, ಶುಕೂರು ಸಾಹೇಬ್ ವಿವಿಧ ತಂಡಗಳ ಮಾಲೀಕರಾದ ಝಬೀರ್, ಅವಿನಾಶ್ ರಾವ್, ಖಾದರ್ ಶರೀನ್, ಝಾಹಿರ್ ಝಾಕಾರಿಯ, ಧೀರಜ್ ಪ್ರಸಾದ್, ಆಸಿಫ್, ಆಶ್ರಫ್, ನಾಸೀರ್, ನೌಶಾದ್,  ಅಬೀಬ್, ಖಲಂದರ್, ಮನ್ಸೂರ್, ರಝೀಮ್, ಕನ್ಯೂಟ್ ಮೊದಲಾದವರು ಉಪಸ್ಥಿತರಿದ್ದರು.

ಸಿರಾಜುದ್ಧೀನ್‍ರವರು ಸ್ವಾಗತಿಸಿದರು. ಮಧು ಮತ್ತು ಬಾಲಕೃಷ್ಣ ಮದ್ದೋಡಿಯವರು ಕಾರ್ಯಕ್ರಮ ನಿರ್ವಹಿಸಿದರು. ಹರಾಜು ಪ್ರಕ್ರಿಯೆಯನ್ನು ಇಮ್ತಿಯಾಝ್‍ರವರು ನಿರ್ವಹಿಸಿದರು. ಶಿವನಾರಾಯಣ ಐತಾಳ ಮತ್ತು ಬಾಲಕೃಷ್ಣ ಪರ್ಕಳರವರು ಹರಾಜು ಪ್ರಕ್ರಿಯೆ ವೀಕ್ಷಕರಾಗಿದ್ದರು.


Spread the love