ಎಂ-ಸ್ಯಾಂಡ್‍ಗೆ ಉತ್ತೇಜನ ನೀಡುವುದಕ್ಕಾಗಿ ಪ್ರಮೋದ್ ಅವರಿಂದ ಕೃತಕ ಮರಳು ಸಮಸ್ಯೆ : ರಘುಪತಿ ಭಟ್
ಉಡುಪಿ: ಜಿಲ್ಲೆಯಲ್ಲಿ ಮರುಳುಗಾರಿಕೆ ಸಂಪೂರ್ಣವಾಗಿ ನಿಲ್ಲಿಸಲು ಹಾಗೂ ಎಂ-ಸ್ಯಾಂಡ್‍ಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಸಚಿವ ಪ್ರಮೋದ್ ಕೃತಕ ಮರಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಸಮಸ್ಯೆ ನಿವಾರಣೆ ಆಗುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾಸಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕ್ಲಾಕ್ ಟವರ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಡಳಿತ ಮನಸ್ಸು ಮಾಡಿದರೆ 5 ನಿಮಿಷದಲ್ಲಿ ಸಮಸ್ಯೆ ನಿವಾರಿಸಬಹುದು. 170 ಮಂದಿಯ ಪರವಾನಗಿ ನವೀಕರಿಸಬೇಕು. ಗ್ರೀನ್‍ಟ್ರಿಬ್ಯುನಲ್ ಆದೇಶ ಬಂದು 4 ತಿಂಗಳಾದರೂ ಮರಳುಗಾರಿಕೆ ಆರಂಭವಾಗಿಲ್ಲ. ಆ.5ಕ್ಕೆ ಎನ್‍ಒಸಿಯೂ ಲಭಿಸಿದೆ. 25 ದಿನಗಳೆದರೂ ಯಾವುದೇ ಪ್ರಗತಿಯಾಗಿಲ್ಲ. ಆಡಳಿತ ನಿಷ್ಕ್ರಿಯವಾಗಿರುವುದಕ್ಕೆ ಇದು ಸಾಕ್ಷಿ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮರಳುಗಾರಿಕೆಗೆ ಅನುಮತಿ ನೀಡುವಾಗ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮರಳು ಸಮಸ್ಯೆ ನಿವಾರಣೆಗೆ ಬುದ್ಧಿವಂತಿಕೆ ಬೇಡ. ಸಾಮಾನ್ಯ ಜ್ಞಾನ ಸಾಕು. ಸಚಿವರಿಗೆ ಇದೂ ತಿಳಿದಿಲ್ಲ. ಕೂಲಿ ಇಲ್ಲದೆ ಕಟ್ಟಡ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಸಾಂಪ್ರದಾಯಿಕ ಮರಳುಗಾರಿಕೆಗೂ ಅನುಮತಿ ಲಭಿಸುತ್ತಿಲ್ಲ. ಮರಳುಗಾರಿಕೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದರೆ ಮಾತ್ರ ಇತರ ಜಿಲ್ಲೆಯಲ್ಲಿ ಪರವಾನಗಿ ನವೀಕರಣ ಮಾಡುವುದಿಲ್ಲ. ಆದರೆ ಉಡುಪಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿದ್ದರೂ ಅಂಥ ವ್ಯಕ್ತಿಗೆ ಅನುಮತಿ ನೀಡಲಾಗುತ್ತಿಲ್ಲ. ಇದು ಆಶ್ಚರ್ಯಕರ ಸಂಗತಿ. 170 ಮಂದಿಯಲ್ಲಿ 127 ಮಂದಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಉಳಿದವರು ಕೋರ್ಟ್‍ಗೆ ಹೋಗಿ ಸ್ಟೇ ತರಲಿ ಎಂದೇ ಜಿಲ್ಲಾಡಳಿತ ಇಂಥ ಧೋರಣೆ ಅನುಸರಿಸಿದೆ ಎಂಬ ಗುಮಾನಿ ಇದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪೂಜಾರಿ, ನಾಯಕರಾದ ಯಶ್‍ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಶ್ರೀಶ ನಾಯಕ್, ಅಕ್ಷಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.