ಎಡಪದವು – ಪೋಷಣಾ ಅಭಿಯಾನ ಸಮಾರೋಪ ಸಮಾರಂಭ
ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇವರ ಜಂಟಿ ಆಶ್ರಯದಲ್ಲಿ ಪೋಷಣಾ ಅಭಿಯಾನ ಮಾಸಾಚರಣೆಯ ಸಮಾರೋಪ ಸಮಾರಂಭ ಎಡಪದವು ಶ್ರೀರಾಮ ಭಜನಾ ಮಂದಿರದಲ್ಲಿ ಜರುಗಿತ್ತು.
ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ವೈ, ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಉತ್ತಮ ಆರೋಗ್ಯ ಮತ್ತು ಪೌಷ್ಠಿಕಾಹಾರ ಪಡೆಯುವುದು ಪ್ರತಿಯೊಬ್ಬರ ಹಕ್ಕು, ಇಲಾಖೆಗಳು ಅಂಗನವಾಡಿ ಮತ್ತು ಗ್ರಾಮ ಮಟ್ಟದಲ್ಲಿ ಪೌಷ್ಟಿಕತೆ ಕುರಿತು ಕಾರ್ಯಕ್ರಮ ಏರ್ಪಡಿಸಿ ಸಾರ್ವಜನಿಕರಲ್ಲಿ ಜ್ಞಾನ ಕೌಶಲ್ಯಗಳ ತಿಳುವಳಿಕೆಯ ಅರಿವು ಮೂಡಿಸುವುದು ನಿಜಕ್ಕೂ ಶ್ಲಾಘನೀಯ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಅದ್ಭುತವಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಇವರು ಮಾತನಾಡಿ ಸರ್ಕಾರಿ ಕಾರ್ಯಕ್ರಮಗಳನ್ನು ಹಬ್ಬದ ರೂಪದಲ್ಲಿ ಜನರ ಮನ ಮುಟ್ಟಿಸುವಲ್ಲಿ ಇಲಾಖೆ ಮಾಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕು ಶ್ಯಾಮಲಾ ಸಿ.ಕೆ ಪೋಷಣಾ ಅಭಿಯಾನ ಮಾಸಾಚರಣೆಯ ಪ್ರಸ್ತಾವಿಕ ಮಾತನಾಡಿ ತಾಯಿ ಮರಣ, ಶಿಶು ಮರಣ ತಡೆಗಟ್ಟುವುದು ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕೂಡಾ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ ರಕ್ತಹೀನತೆ, ಅತಿಸಾರಬೇದಿ, ಕೈತೊಳೆಯುವುದು ಮತ್ತು ನೈರ್ಮಲ್ಯತೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಸಂಧರ್ಭದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಾಗೂ ಮಡಿಲು ತುಂಬಿಸುವ ಕಾರ್ಯಕ್ರಮವನ್ನು ಸನ್ಮಾನ್ಯ ಶಾಸಕರು ಹಾಗೂ ಗಣ್ಯರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸದಸ್ಯರು, ಮಕ್ಕಳ ತಾಯಂದಿರು ಸುಮಾರು 450 ಮಹಿಳೆಯರು ಉಪಸ್ಥಿತರಿದ್ದರು.
ಸುಮಾರು 120 ವಿವಿಧ ಆಹಾರದ ಪ್ರಾತ್ಯಕ್ಷಿಕೆ ಹಾಗೂ ಸ್ಥಳೀಯವಾಗಿ ಬೆಳೆದ ಸೊಪ್ಪು ತರಕಾರಿ, ಹಣ್ಣುಗಳು ಹಾಗೂ ವಿವಿಧ ಧಾನ್ಯ ಕಾಳುಗಳ ಪ್ರದರ್ಶನ ಜರುಗಿತ್ತು.