ಎತ್ತಿನ ಹೊಳೆ ಹಸಿರುಪೀಠದ ತೀರ್ಪು ಜಿಲ್ಲೆಯ ಪರ ಬರುವಂತೆ ಪ್ರಾರ್ಥನೆ
ಮಂಗಳೂರು: ಎತ್ತಿನ ಹೊಳೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ರಾಷ್ಟ್ರೀಯ ಹಸಿರುಪೀಠ ನೀಡುವ ತೀರ್ಪು ದಕ ಜಿಲ್ಲೆಯ ಪರವಾಗಿ ಬರಲಿ ಎಂದು ನೇತ್ರಾವತಿ ಸಂರಕ್ಷಣಾ ಸಮಿತಿಯ ವತಿಯಿಂದ ಕುದ್ರೋಳಿ ಗೋಕರ್ಣನಾಥೇಶ್ವರ, ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಮಿಲಾಗ್ರಿಸ್ ಚರ್ಚ್ ಹಾಗೂ ಉಳ್ಳಾಲ ದರ್ಗದಾಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನೇತ್ರಾವತಿ ಸಂರಕ್ಷಣಾ ಸಮಿತಿಯು ಎತ್ತಿನಹೊಳೆ ಯೋಜನೆ ವಿರುದ್ದ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ತೀರ್ಪು ಸಪ್ಟೆಂಬರ್ 21 ರಂದು ಹೊರಬಿಳಲಿದೆ, ಜಿಲ್ಲೆಯ ಜನರಿಗೆ ವಂಚಿತವಾಗದ ರೀತಿಯಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜಯ ಲಭಿಸುವಂತೆ ನ್ಯಾಯಾಧೀಶರು ತೀರ್ಪು ಪ್ರಕಟಿಸಲು ಎಲ್ಲಾ ಧರ್ಮದ ಆರಾಧನಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ.
ಎತ್ತಿನಹೊಳೆ ಯೋಜನೆ ಜಾರಿಯಾದರೆ ಮುಂದಿನ ಜನಾಂಗಕ್ಕೆ ತೊಂದರೆಯಾಗಲಿದ್ದು, ಮಂಗಳೂರಿಗೆ ನೀರೀನ ಅಭಾವ ಉಂಟಾಗಲಿದೆ. ಹಲವು ಜನಪ್ರತಿನಿಧಿಗಳು ಹೋರಾಟದಲ್ಲಿ ಕೈ ಜೋಡಿಸಿದ್ದು, ಜಿಲ್ಲೆಗೆ ಪೂರಕವಾದ ತೀರ್ಪು ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.