ಎದುರಾಗುವ ಸವಾಲುಗಳನ್ನು ಸಂಪನ್ಮೂಲವಾಗಿ ಬಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಮಂಜುನಾಥ ಶೆಟ್ಟಿ ಕಿವಿಮಾತು
ಕುಂದಾಪುರ: ಸಾಧನೆ ಮಾಡುವಾಗ ಸವಾಲುಗಳು ಎದುರಾದರೆ ಆ ಸವಾಲುಗಳನ್ನೇ ಸಂಪನ್ಮೂಲವಾಗಿ ಬಳಸಿಕೊಳ್ಳಬೇಕೆ ವಿನಃ ಕೈಚೆಲ್ಲಿ ಕುಳಿತುಕೊಳ್ಳಬಾರದು. ಇಂದು ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಭೆಗಳು ಹಲವು ಸವಾಲುಗಳನ್ನು ಎದುರಿಸಿ ಬಂದವರೇ ಎಂದು ಉಪ್ಪುಂದ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಶೆಟ್ಟಿ ಹೇಳಿದರು.
ಜನತಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿ.ವಿ.ವಿ ಮಂಡಳಿ (ರಿ) ಹೆಮ್ಮಾಡಿ, ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ (ರಿ) ಇದರ ಆಡಳಿತದ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ “ಖೇಲೊ ಜನತಾ -2023” ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಹಾಗೂ ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಕ್ರೀಡಾ ಸಾಧನೆಯ ಜೊತೆಗೆ ಶೈಕ್ಷಣಿಕ ಸಾಧನೆಯಲ್ಲಿ ಹಿಂದುಳಿಯಬಾರದು. ಕ್ರೀಡೆಯಲ್ಲಿ ಸಾಧನೆ ಮಾಡಿದವರು ಶೈಕ್ಷಣಿಕವಾಗಿಯೂ ಸಾಧನೆ ಮಾಡಿದರೆ ಮುಂದೆ ಒಳ್ಳೆಯ ಭವಿಷ್ಯವಿದೆ. ಕಾಲೇಜು ಆರಂಭಗೊಂಡ ಎರಡೇ ವರ್ಷಗಳಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಅಚ್ಚರಿ ಮೂಡಿಸುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇದುವರೆಗೂ 27 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಾಧಾರಣ ವಿಚಾರವಲ್ಲ ಎಂದರು.
ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ 20 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಗೆ ಮುಂದಾಗಿದ್ದೇವೆ ಎಂದು ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಹೇಳಿದರು.
ಶಿಸ್ತುಬದ್ದ, ಆಕರ್ಷಕ ಪಥ ಸಂಚಲನ:
ಕಾಲೇಜಿನ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ಹೊತ್ತು ಸಾಗಿ ಬಂದರು. ವಿದ್ಯಾರ್ಥಿಗಳಿಂದ ಶಿಸ್ತುಬದ್ದ, ಆಕರ್ಷಕ ಪಥ ಸಂಚಲನ ನಡೆಯಿತು. ಉಪ್ಪುಂದ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಶೆಟ್ಟಿ ಗೌರವ ವಂದನೆ ಸ್ವೀಕರಿಸಿದರು. ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥ ಸಂಚಲನಕ್ಕೆ ಮತ್ತಷ್ಟು ಮೆರುಗು ನೀಡಿತು.
ಕುಂದಾಪುರ ಸಿಟಿ ಜೆಸಿಐ 2024ರ ಅಧ್ಯಕ್ಷ ರಾಘವೇಂದ್ರ ಕುಲಾಲ್ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜ್ಯ ಮಟ್ಟದ ಕುಸ್ತಿ ಪಟು, ವಿದ್ಯಾರ್ಥಿ ಚೇತನ್ ಖಾರ್ವಿ ವಿದ್ಯಾರ್ಥಿಗಳಿಗೆ ಪ್ರತಿಜಾÐ ವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ನಾಯ್ಕ್ ಧನ್ಯವಾದವಿತ್ತರು. ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.