ಎನ್.ಸಿ. ರಾಮಚಂದ್ರ ನಾಯ್ಕರಿಗೆ ರಾಷ್ಟ್ರಪತಿ ಪದಕ
ಮಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸುವಲ್ಲಿ ಹಾಗೂ ರಕ್ಷಣಾ ಕರೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದರಿಗೆ ದೇಶದ 72ನೆ ಸ್ವಾತಂತ್ರೋತ್ಸವದ ಸಂದರ್ಭ ನೀಡಲ್ಪಡುವ ರಾಷ್ಟ್ರಪತಿ ಪದಕಕ್ಕೆ ಪುತ್ತೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಎನ್.ಸಿ.ರಾಮಚಂದ್ರ ನಾಯ್ಕ ಆಯ್ಕೆಯಾಗಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ 1993ರ ಫೆ.1ರಂದು ಅಗ್ನಿಶಾಮಕ ಚಾಲಕರಾಗಿ ಸೇರ್ಪಡೆಗೊಂಡ ಎನ್.ಸಿ.ರಾಮಚಂದ್ರ ನಾಯ್ಕ ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಿ ಪ್ರಸ್ತುತ ಪುತ್ತೂರು ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಮಾರು ತನ್ನ 25 ವರ್ಷಗಳ ಸೇವಾ ಅವಧಿಯಲ್ಲಿ ಅಗ್ನಿಕರೆಯಲ್ಲಿ ಖಾಸಗಿ/ಸಾರ್ವಜನಿಕ ಆಸ್ತಿಪಾಸ್ತಿ ಸಂರಕ್ಷಿಸುವಲ್ಲಿ ಹಾಗೂ ರಕ್ಷಣಾ ಕರೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದುದನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಪುರಸ್ಕೃತರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.