Home Mangalorean News Kannada News ಎಯ್ಯಾಡಿ – ದಂಡೆಕೇರಿ ಶಕ್ತಿನಗರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

ಎಯ್ಯಾಡಿ – ದಂಡೆಕೇರಿ ಶಕ್ತಿನಗರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

Spread the love

ಎಯ್ಯಾಡಿ – ದಂಡೆಕೇರಿ ಶಕ್ತಿನಗರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು: ಮಂಗಳೂರಿನ ಭವಿಷ್ಯದ ಮುಖ್ಯ ರಸ್ತೆಗಳಲ್ಲೊಂದಾದ ಎಯ್ಯಾಡಿ ಜಂಕ್ಷನ್ ನಿಂದ ದಂಡೇಕೇರಿ ಶಕ್ತಿನಗರ ಕೂಡು ರಸ್ತೆಗೆ ಕಾಂಕ್ರಿಟೀಕರಣ ಹಾಗೂ ಒಳಚರಂಡಿ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ  ಜೆ.ಆರ್.ಲೋಬೊ ಹಾಗೂ ಮೇಯರ್  ಕವಿತಾ ಸನಿಲ್ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ  ಜೆ.ಆರ್.ಲೋಬೊರವರು, ಬಹಳ ಹಿಂದಿನಿಂದಲೂ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಇರಾದೆ ಪಾಲಿಕೆಗೆ ಇತ್ತು. ಭವಿಷ್ಯದ ಮಂಗಳೂರಿಗೆ ಇದೊಂದು ಮುಖ್ಯವಾದ ರಸ್ತೆಯಾಗಲಿದೆ. ಶಕ್ತಿನಗರ ಪ್ರದೇಶವು ಭವಿಷ್ಯದ ದಿನಗಳಲ್ಲಿ ನಗರದ ಸ್ಯಾಟ್ ಲೈಟ್ ನಗರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಗೆ ವಿಶೇಷವಾದ ಒತ್ತನ್ನು ಕೊಡಲಾಗುತ್ತದೆ. ಶಕ್ತಿನಗರ ಪ್ರದೇಶದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಈ ರಸ್ತೆಯು ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಈ ರಸ್ತೆ ಪೂರ್ಣಗೊಂಡ ನಂತರ ನಂತೂರು ಮುಖ್ಯ ರಸ್ತೆಯಲ್ಲಿ ವಾಹನಗಳ ಒತ್ತಡ ಕಡಿಮೆಯಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರ ಮುಖ್ಯಮಂತ್ರಿಯವರ ರೂ.100 ಕೋಟಿ ಅನುದಾನದ ನಿಧಿಯಿಂದ ರೂ. 1.50 ಕೋಟಿ ಹಣವನ್ನು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಬಳಸಲಾಗುವುದು. ಸುಮಾರು 290 ಮೀಟರ್ ಉದ್ದವಿರುವ ಈ ರಸ್ತೆಯು 7 ಮೀಟರ್ ಅಗಲದಿಂದ ಕೂಡಿರುತ್ತದೆ. ಅದಲ್ಲದೇ ಈ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಮುಖ್ಯಮಂತ್ರಿಯವರ ರೂ.100 ಕೋಟಿ ಅನುದಾನದ ನಿಧಿಯಿಂದ ಉಳಿಕೆ ಅನುದಾನದಿಂದ ರೂ. 15 ಲಕ್ಷ ಈ  ಕಾಮಗಾರಿಗೆ ಮಂಜುರಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಬಿತಾ ಮಿಸ್ಕಿತ್, ಕಾರ್ಪೋರೇಟರ್ ಗಳಾದ ರೂಪಾ ಡಿ ಬಂಗೇರ, ಅಖಿಲ ಆಳ್ವ, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಪ್ರಮುಖರಾದ ಉಮೇಶ ದಂಡೇಕೇರಿ, ಗಿರಿಧರ ಶೆಟ್ಟಿ, ಮೋಹನ್ ಶೆಟ್ಟಿ ಹಾಗೂ ಪಾಲಿಕೆಯ ಉಪಾಯುಕ್ತ ಲಿಂಗೇಗೌಡ, ಅಭಿಯಂತರರಾದ ರಘುಪಾಲ್, ಲಕ್ಷ್ಮಣ್ ಪೂಜಾರಿ ಗುತ್ತಿಗೆದಾರರಾದ ಅಬ್ದುಲ್ ರೆಹಮಾನ್, ಕೆ ಸಿ ರಜಾಕ್ ಉಪಸ್ಥಿತರಿದ್ದರು.


Spread the love

Exit mobile version