ಎರಡನೇ ವಾರದ ಸಂಡೇ ಲಾಕ್ಡೌನ್- ಸ್ಥಬ್ಧವಾಗಿದೆ ಉಡುಪಿ ಜಿಲ್ಲೆ
ಉಡುಪಿ: ರಾಜ್ಯದಲ್ಲಿ ನಿಯಂತ್ರಣ ತಪ್ಪುತ್ತಿರುವ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಮಟ್ಟಹಾಕಲು ಘೋಷಣೆ ಮಾಡಲಾಗಿರುವ ಎರಡನೇ ವಾರದ ಸಂಡೇ ಲಾಕ್ಡೌನ್ ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದ್ದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಲ್ಲೊಂದು ಇಲ್ಲೊಂದು ದ್ವಿಚಕ್ರ ವಾಹನ ಹೊರತು ಪಡಿಸಿದರೆ ವಾಹನಗಳ ಓಡಾಟವೂ ಇಲ್ಲ. ಅತ್ಯವಶ್ಯಕ ವಸ್ತುಗಳಾದ ಹಾಲು, ದಿನಸಿ, ದಿನಪತ್ರಿಕೆ ವಿತರಣೆ ಹೊರತು ಪಡಿಸಿ ಎಲ್ಲವೂ ಲಾಕ್ಡೌನ್ ಆಗಿದೆ. ಕಳೆದ ವಾರ ಸಹ ಜನ ಸ್ವಯಂ ನಿಯಂತ್ರಣ ಹಾಕಿಕೊಂಡು ಸಂಡೇ ಲಾಕ್ಡೌನ್ ಯಶಸ್ವಿ ಮಾಡಿದ್ದರು.
ಉಡುಪಿ ನಗರದ ಬಹುತೇಕ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿದ್ದು, ಕೇವಲ ಅತ್ಯವಶ್ಯಕ ವಾಹನಗಳಷ್ಟೆ ರಸ್ತೆಯಲ್ಲಿ ಓಡಾಟ ಮಾಡುತ್ತಿವೆ. ನಗರದ ಪ್ರಮುಖ ರಸ್ತೆಗಳು ಬ್ಯಾರಿಕೇಡ್ ಹಾಕಿ ಪೊಲೀಸರು ಕ್ಲೋಸ್ ಮಾಡಿದ್ದಾರೆ. ನಗರದ ಎಲ್ಲಾ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಎರಡನೇ ಹಂತದ ಅನ್’ಲಾಕ್ ಅವಧಿಯಲ್ಲಿನ ಪ್ರತಿ ಭಾನುವಾರ ಲಾಕ್’ಡೌನ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ತುರ್ತುಸೇವೆ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಇನ್ನುಳಿದ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಇದೇ ಮಾದರಿಯ ಭಾನುವಾರದ ಲಾಕ್’ಡೌನ್ ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ