ಎರಡು ದಿನಗಳ ‘ಮಂಗಳೂರು ಲಿಟ್ ಫೆಸ್ಟ್’ಗೆ ಇತಿಹಾಸಕಾರ ಎಂ.ಚಿದಾನಂದ ಮೂರ್ತಿ ಚಾಲನೆ
ಮಂಗಳೂರು: ನಮ್ಮ ಸಂವಿಧಾನದಲ್ಲಿ ದೇಶವನ್ನು ‘ಇಂಡಿಯಾ’ ಎಂದು ಕರೆದು ತಪ್ಪುಮಾಡಲಾಗಿದೆ. ಭಾರತ ಎಂದಾಗ ನಮ್ಮ ಸಂಸ್ಕೃತಿ ನೆನಪಿಗೆ ಬರುತ್ತದೆ. ಆದರೆ ಇಂಡಿಯಾ ಎಂದಾಗ ಅದು ನೆನಪಾಗಲು ಸಾಧ್ಯವಿಲ್ಲ ಎಂದು ಸಂಶೋಧಕ, ಇತಿಹಾಸಕಾರ ಎಂ.ಚಿದಾನಂದ ಮೂರ್ತಿ ಅಭಿಪ್ರಾಯಿಸಿದ್ದಾರೆ.
ನಗರದ ಟಿಎಂಎ ಪೈ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ‘ಮಂಗಳೂರು ಲಿಟ್ ಫೆಸ್ಟ್’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದೇಶದ ಅಂತಃಸತ್ವ ಇಲ್ಲಿನ ಧರ್ಮದಲ್ಲಿದೆ. ಧರ್ಮ ಎಂದರೆ ಜಾತಿಗೆ ಸೀಮಿತ ವಾದುದಲ್ಲ. ಧರ್ಮ ನಾವು ಧಾರಣೆ ಮಾಡಿರುವುದು ಎಂದು ಅವರು ನುಡಿದರು.
ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರ ರದ್ದು ಮಾಡಿದ್ದಕ್ಕೆ ಕೇಂದ್ರ ಮತ್ತು ರಾಜ್ಯಸರಕಾರವನ್ನು ಅಭಿನಂದಿಸುವುದಾಗಿ ಹೇಳಿದ ಚಿದಾನಂದ ಮೂರ್ತಿ, ಟಿಪ್ಪುವನ್ನು ವೈಭವೀಕರಿಸುವವರಿಗೆ ಸತ್ಯ ಬೇಕಾಗಿಲ್ಲ. ಬದಲಾಗಿ ಸ್ವಯಂ ವೈಭವೀಕರಣ ಅವರಿಗೆ ಬೇಕಾಗಿದೆ ಎಂದು ಟೀಕಿಸಿದರು.
ಸತ್ಯದ ಉತ್ಖನನ – ಹರ್ಷಾ ಭಟ್ ಅವರೊಂದಿಗೆ ಡಾ . ಕೆ. ಕೆ. ಮೊಹಮದ್
ಮಂಗಳೂರಿನ ಟಿ ಎಂ ಎ ಪೈ ಸಭಾಂಗಣದಲ್ಲಿಂದು ಭಾರತೀಯ ಪುರಾತತ್ಫ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಕೆ. ಮೊಹಮದ್ ಅವರು ಶ್ರೀರಾಮ ಜನ್ಮಭೂಮಿಯಲ್ಲಿ ಉತ್ಖನನ ನಡೆಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಮಂಗಳೂರು ಲಿಟ್ ಫೆಸ್ಟ್ ನಲ್ಲಿ ನಡೆದ ‘ಸತ್ಯದ ಉತ್ಖನನ’ ಎಂಬ ವಿಷಯದ ಕುರಿತ ಸಂವಾದದಲ್ಲಿ ಭಾಗವಹಿಸಿದ ಅವರು ತಮ್ಮ ೪೦ ವರ್ಷಗಳ ಪುರಾತತ್ವ ಇಲಾಖೆಯ ಕೆಲಸದ ರೋಚಕ ಅನುಭವಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಡೆದ ಮೊದಲ ಉತ್ಖನನದಲ್ಲೇ ನೆಲದಡಿ ಹುದುಗಿದ್ದ ಮಂದಿರದ ೧೨ ಕಂಬಗಳು ಸಿಕ್ಕಿದ್ದವು. ಆದರೂ ಪ್ರಸಿದ್ಧ ಇತಿಹಾಸಕಾರರೊಬ್ಬರು ಅಲ್ಲಿ ಮಂದಿರವಿರಲಿಲ್ಲ ಎಂದು ಹೇಳಿದ್ದರು ಎಂದು ತಮ್ಮ ನೆನಪನ್ನು ಹಂಚಿಕೊಂಡರು. ಎರಡನೆಯ ಬಾರಿ ನಡೆದ ಉತ್ಖನನವೂ ಅಲ್ಲಿ ಮಸೀದಿಗೆ ಮೊದಲು ಮಂದಿರವಿದ್ದದ್ದನ್ನು ಖಚಿತಪಡಿಸಿದವು. ಇದರ ಆಧಾರದ ಮೇಲೆಯೇ ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದೆ ಎಂದು ಅವರು ಹೇಳಿದರು.
ತಮ್ಮ ನಡುವಿನ ಒಳಜಗಳದ ಕಾರಣದಿಂದಲೇ ಭಾರತ ಯಾವ ಎತ್ತರಕ್ಕೆ ಬೆಳೆಯಬೇಕಿತ್ತೋ ಅಷ್ಟು ಎತ್ತರಕ್ಕೆ ಬೆಳೆಯಲಿಲ್ಲ. ನಾವು ಬೇರೆ ಬೇರೆ ಮತದವರಿದ್ದರೂ ನಮ್ಮ ಸಾಂಸ್ಕೃತಿಕ ಪರಂಪರೆ ಒಂದೇ ಎಂದು ಹೇಳಿದ ಅವರು ತಾವು ಬಾಲ್ಯದಲ್ಲಿ ರಾಮಾಯಣ ಮಹಾಭಾರತದ ಕತೆಗಳನ್ನು ಕೇಳಿ ಬೆಳೆದಿದ್ದನ್ನು ನೆನಪಿಸಿಕೊಂಡರು. ಇವತ್ತಿನ ಶಿಕ್ಷಣದಲ್ಲೂ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಭಾರತದ ಪ್ರಭಾವ ವಿಶ್ವದಲ್ಲಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೆ ರಾಷ್ಟ್ರಭಕ್ತಿಯ ಭಾವ ಜಾಗೃತಿ ಆಗುತ್ತಿರುವುದೂ ಒಳ್ಳೆಯದು. ದೇಶದ ಅಭಿವೃದ್ಧಿಗೆ ಇದು ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ಅಯೋಧ್ಯೆಯ ತೀರ್ಪಿನಿಂದಾಗಿ ಎಡಪಂಥೀಯ ಇತಿಹಾಸಕಾರರು ಮುಖ ಮುಚ್ಚಿಕೊಳ್ಳುವಂತಾಗಿದೆ ಎಂಬುದಂತೂ ಸತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೆ. ಕೆ. ಮೊಹಮದ್ ಅವರು ಬರೆದ ‘ನಾನೆಂಬ ಭಾರತೀಯ’ ಎಂಬ ಅನುವಾದಿತ ಪುಸ್ತಕ ಈ ಸಂದರ್ಭದಲ್ಲಿ ಬಿಡುಗಡೆಗೊಂಡಿತು.
ವೈವಿಧ್ಯತೆ ಹಾಗೂ ಪ್ರದರ್ಶನ ಕಲೆಯ ಕುರಿತಾದ ವಿಷಯದ ಬಗ್ಗೆ ವೆಂಕಟ್ ರಾವ್ ಹಾಗು ಅಶ್ವಿನಿ ದೇಸಾಯಿ ಯವರು ನಡೆಸಿದ ಸಂವಾದ.
ಮಂಥನ ವೇದಿಕೆಯಲ್ಲಿ ಮೊದಲ ಸಂವಾದ ಸಾಹಿತ್ಯ ಹಾಗು ಸಂಸ್ಕೃತಿ ವಿಭಾಗದ ಪ್ರೊ ಡಿ. ವೆಂಕಟ್ ರಾವ್ ಹಾಗೂ ಆರೋಹಿ ಸಂಸ್ಥೆಯ ಸಂಶೋಧಕರು ಅಶ್ವಿನಿ ದೇಸಾಯಿ ಅವರು ನಡೆಸಿಕೊಟ್ಟರು,
ಭಾರತೀಯ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಕಲಾ ರೂಪಗಳನ್ನು ತಿಳಿಸಿಕೊಡುವ ಪ್ರಯತ್ನಮಾಡಲಾಯಿತು. ಕಲೆ, ಹಾಗೂ ಸಂಸ್ಕೃತಿಯನ್ನು ತಿಳಿಸಿಕೊಡಲು ಬಳಸುವ ಪಾಶ್ಚಾತ್ಯ ಭಾಷೆಯ ಪ್ರಯೋಗವನ್ನು ಪ್ರೊ. ಡಿ ವೆಂಕಟ್ ರಾವ್ ಖಂಡಿಸಿದರು. ಪ್ರದರ್ಶನ ಕಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದರಿಂದ ಕಲೆಗೆ ಅಪಾಯ ಎಂದು ಅಭಿಪ್ರಾಯಪಟ್ಟರು. ಯೂರೋಪಿನ ಸಮಾಜವು ಬರವಣಿಗೆಯ ಮೂಲಕ ಸಂವಾದ ನಡೆಸಿದರೆ, ಭಾರತೀಯ ಪರಂಪರೆಯಲ್ಲಿ ಪ್ರದರ್ಶನ, ಭಾಷೆಯ ಮೂಲಕ ಕಲೆಯನ್ನು ಅಭಿವ್ಯಕ್ತಪಡಿಸಿದ್ದರು. ಭಾಷೆಯ ಬಳಸುವಿಕೆಯಿಂದ ಸಮಾಜದಲ್ಲಿನ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದರು.
ನಮ್ಮಲ್ಲಿ ಜಾತಿಗಳು ಹಲವಾರಿದ್ದರು ಅವುಗಳು ವೈವಿಧ್ಯತೆಯಿಂದ ಕೂಡಿದ್ದರೂ ಸಮಾಜದಲ್ಲಿ ಸಮರಸತೆಯನ್ನು ಕಾಣುವ ಸಾಧನವಾಗಿ ಕೆಲಸ ಮಾಡಿದ್ದವು ಎಂದು ಡಿ. ವೆಂಕಟ್ ರಾವ್ ಅಭಿಪ್ರಾಯಪಟ್ಟರು. ಜಾತಿಗಳನ್ನು ಬಹಿಷ್ಕರಿಸುವುದರಿಂದ ಪಾರಂಪರಿಕವಾಗಿ ಬಂದ ಜ್ಞಾನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಪಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಜಾನಪದ ಎಂಬ ಪದವನ್ನು ಬಳಸಿ ಅಗಾಧ ಶಕ್ತಿಯನ್ನೊಳಗೊಂಡ ಪ್ರದರ್ಶನ ಕಲೆಯನ್ನು ಮೂದಲಿಸುವುದು ತಪ್ಪೇನೆಂದು ಅವರು ತಿಳಿಸಿದರು. ಸಭಿಕರು ಕೇಳಿದ ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು. ಪ್ರೊ ವೆಂಕಟ್ ರಾವ್, ಹಾಗೂ ಅಶ್ವಿನಿ ದೇಸಾಯಿ ಅವರಿಗೆ ನೆನಪಿನ ಕಾಣಿಕೆಯನ್ನು ಕೊಡಲಾಯಿತು.