ಎಲ್‍ಪಿಜಿ ಟ್ಯಾಂಕರ್‍ಗಳ ಅಪಘಾತ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಬಿಗಿ ಕ್ರಮ ಜಾರಿ

Spread the love

ಎಲ್‍ಪಿಜಿ ಟ್ಯಾಂಕರ್‍ಗಳ ಅಪಘಾತ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಬಿಗಿ ಕ್ರಮ ಜಾರಿ

ಮ0ಗಳೂರು: ಇತ್ತೀಚೆಗೆ LPG ಗ್ಯಾಸ್ ಟ್ಯಾಂಕರ್ ವಾಹನಗಳಿಂದ ಹೆಚ್ಚು ಅಪಘಾತಗಳು ಆಗುತ್ತಿರುವ ಹಿನ್ನಲೆಯಲ್ಲಿ, ಸದ್ರಿ ಅಪಘಾತಗಳನ್ನು ತಡೆಗಟ್ಟಲು ಮತ್ತು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.

ಇದುವರೆಗೆ 3 ಸಭೆಗಳನ್ನು ನಡೆಸಿ ವಿವಿಧ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಹಾಗೂ ಇತರ ಸಂಚಾರಿ ವಾಹನಗಳಿಗೆ ತೊಂದರೆ ಆಗುತ್ತಿರುವುದನ್ನು ತಡೆಗಟ್ಟಲು 2 ರಿಂದ 3 ಎಕ್ರೆ ಜಮೀನನ್ನು ಗುರುತಿಸಿ, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾದಂತೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ 3 ಎಕ್ರೆ ಜಾಗವನ್ನು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗಾಗಿ ಗುರುತಿಸಲಾಗಿದೆ. ಈ ಸ್ಥಳದಲ್ಲಿ ಎಲ್ಲಾ ಟ್ಯಾಂಕರ್ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಯಾವುದೇ ಗ್ಯಾಸ್ ಟ್ಯಾಂಕರ್ ವಾಹನಗಳು ಸಂಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ರಾತ್ರಿ ವೇಳೆಯಲ್ಲಿ ಗ್ಯಾಸ್ ಟ್ಯಾಂಕರ್ ವಾಹನಗಳ ಸಂಚಾರ ಇರುವುದಿಲ್ಲ. ಮತ್ತು ಇದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಮತ್ತು ಪೊಲೀಸ್ ಅಧಿಕಾರಿಗಳು ಪರಿಣಾಮಕಾರಿಯಾಗಿ ಜ್ಯಾರಿಗೊಳಿಸಬೇಕು. ನಿಯಮದಂತೆ ಪ್ರತಿ ಗ್ಯಾಸ್ ವಾಹನದಲ್ಲಿ ಇಬ್ಬರು ಡ್ರೈವರ್ ಕಡ್ಡಾಯವಾಗಿ ಇರತಕ್ಕದ್ದು. ಈ ಬಗ್ಗೆ ವ್ಯವಸ್ಥೆ ಮಾಡಲು ಸಂಬಂಧಿಸಿದ ಕಂಪೆನಿ ಮುಖ್ಯಸ್ಥರುಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಯಾವ ವಾಹನದಲ್ಲಿ ಇಬ್ಬರು ಡ್ರೈವರ್ ಇರುವುದಿಲ್ಲವೋ ಅಂತಹ ವಾಹನಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಸೂಚಿಸಲಾಗಿದೆ.

ಸಂಚಾರಿ ಕ್ರೇನನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲು ಕಂಪೆನಿಗಳಿಗೆ ಸೂಚಿಸಲಾಗಿದೆ. ಅಪಘಾತಗಳ ಸಂದರ್ಭಗಳಲ್ಲಿ ತಕ್ಷಣ ಸ್ಥಳವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಂಚಾರಿ ಕ್ರೇನನ್ನು ಇಟ್ಟುಕೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ.

ಪ್ರಸ್ತುತ Emergency Response Vehicle ಒಂದು ವಾಹನವು HPCL ಕಂಪೆನಿಯ ಬಳಿ ಇದ್ದು, ಅಪಘಾತ ಸಂದರ್ಭದಲ್ಲಿ, ಅಪಘಾತ ನಡೆದ ಸ್ಥಳ ತಲುಪಲು ಸಮಯಾವಕಾಶ ತೆಗದುಕೊಳ್ಳುವುದರಿಂದ, ಹೆಚ್ಚುವರಿಯಾಗಿ ಇನ್ನೊಂದು Emergency Response Vehicle ವಾಹನವನ್ನು ಖರೀದಿಸಲು ಕಂಪೆನಿಯವರಿಗೆ ಸೂಚಿಸಲಾಗಿದೆ. ಕಂಪೆನಿಯವರು ಕಾಲಾವಕಾಶ ಕೋರಿರುತ್ತಾರೆ. ತಂಡದಲ್ಲಿರುವ ಎಲ್ಲಾ ತಾಂತ್ರಿಕ ವ್ಯಕ್ತಿಗಳು ಹಾಗೂ ಪ್ರತಿನಿಧಿಗಳಿಗೆ ಸದ್ರಿ ಕಂಪೆನಿಗಳು ತರಭೇತಿ ನೀಡಿ, ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.

ಟ್ಯಾಂಕರ್ ವಾಹನಗಳ ವೇಗದ ಮಿತಿ ಹಾಗೂ ಇನ್ನಿತರ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು (V.T.S.) Vehicle Tracking System ನ್ನು ಕಡ್ಡಾಯವಾಗಿ ಬಳಸಲು ನಿರ್ದೇಶನ ನೀಡಲಾಗಿದೆ. ಸದ್ರಿ V.T.S. ವ್ಯವಸ್ಥೆಯನ್ನು ಪೊಲೀಸ್ ಕಂಟ್ರೋಲ್ ವ್ಯವಸ್ಥೆಯೊಂದಿಗೆ ಸಮೀಕರಣಗೊಳಿಸಿ ಪೊಲೀಸ್ ಇಲಾಖೆ ಮೂಲಕವೂ ಈ ಬಗ್ಗೆ ಪರಿಶೀಲಿಸಲು ನಿರ್ಣಯಿಸಲಾಗಿದೆ. ಪ್ರತಿಯೊಂದು ಗ್ಯಾಸ್ ವಾಹನಗಳಿಗೆ Speed Governor ನ್ನು ಅಳವಡಿಸಲು ಸೂಚಿಸಲಾಗಿದೆ.

ಯಾವುದೇ ಗ್ಯಾಸ್ ವಾಹನಗಳು ಇನ್ನೊಂದು ಟ್ಯಾಂಕರ್ ವಾಹನವನ್ನು ಓವರ್ ಟೇಕ್ ಮಾಡುವುದನ್ನು ನಿಯಂತ್ರಿಸಲು ಮತ್ತು ಅಂತಹ ವಾಹನ ಚಾಲಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ಣಯಿಸಲಾಗಿದೆ.

ಟ್ಯಾಂಕರ್ ವಾಹನ ಚಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ನೇತ್ರತ್ವದಲ್ಲಿ ತರಭೇತಿಯನ್ನು ನೀಡಲು ಸಹ ಸೂಚಿಸಲಾಗಿದೆ. ಇದರಂತೆ ಈಗಾಗಲೇ ವಿವಿಧ ಕಂಪೆನಿಗಳು ಚಾಲಕರಿಗೆ ತರಬೇತಿಯನ್ನು ನೀಡುತ್ತಿರುತ್ತಾರೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಗ್ಯಾಸ್ ಟ್ಯಾಂಕರ್ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಮತ್ತು ಕಂಪೆನಿಯವರು ಪ್ರತ್ಯೇಕವಾಗಿ ವಾಹನಗಳಿಗೆ ನಿಲ್ಲಿಸಲು ವ್ಯವಸ್ಥೆಯನ್ನು ಮಾಡಿರುವುದರಿಂದ, ಈ ಎರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಎಲ್ಲಾ ಗ್ಯಾಸ್ ಟ್ಯಾಂಕರ್ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ನಿಲ್ಲಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Spread the love