Home Mangalorean News Kannada News ಎಸ್‌ಡಿಪಿಐ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ : ಶಾಹುಲ್ ಹಮೀದ್

ಎಸ್‌ಡಿಪಿಐ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ : ಶಾಹುಲ್ ಹಮೀದ್

Spread the love

ಎಸ್‌ಡಿಪಿಐ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ : ಶಾಹುಲ್ ಹಮೀದ್

ಮಂಗಳೂರು: ತುಮಕೂರು ತ್ರಿವಳಿ‌ ಕೊಲೆ ಪ್ರಕರಣದ ವಿಚಾರದಲ್ಲಿ ಎಸ್‌ಡಿಪಿಐ ಮುಖಂಡರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು , ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಆಗ್ರಹಿಸಿದ್ದಾರೆ

ತುಮಕೂರಿನಲ್ಲಿ ನಡೆದ ಬೆಳ್ತಂಗಡಿ ತಾಲೂಕಿನ ಮೂವರ ಕೊಲೆ ಪ್ರಕರಣದ ಬಗ್ಗೆ ಎಸ್‌ಡಿಪಿಐ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದರ್ ಬಜತ್ತೂರು ಅವರು ತುಮಕೂರು ಪೊಲೀಸರ ವಿರುದ್ಧ 54 ಲಕ್ಷ ರೂಪಾಯಿ ಲೂಟಿ ಹೊಡೆದಿರುವ ಆರೋಪ ಹೊರಿಸಿದ್ದಾರೆ. ಪೊಲೀಸರು 6 ಲಕ್ಷ ರೂಪಾಯಿ ಹಣದ ಲೆಕ್ಕ ತೋರಿಸಿ 54 ಲಕ್ಷ ರೂಪಾಯಿ ತಿಂದು ತೇಗಿರುವುದಾಗಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಈ ಬಗ್ಗೆ ಅನ್ವರ್ ಸಾದತ್ ಬಜತ್ತೂರು ಅವರ ಬಳಿ‌ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಪೊಲೀಸರ ಮೇಲೆ ವೃಥಾ ಆರೋಪ ಮಾಡುವ ಬದಲು ದಾಖಲೆ ಒದಗಿಸಬೇಕು.

ತುಮಕೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಸಂಬಂಧ ಸರಕಾರ ಮತ್ತು ಪೊಲೀಸರ ಕ್ರಮ‌ ಶ್ಲಾಘನೀಯ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ನಡೆದ ಆರು ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಕೊಲೆ ಪಾತಕದ ಹಿಂದಿನ‌ ರಹಸ್ಯಗಳನ್ನು ಬೆಳಕಿಗೆ ತಂದಿದ್ದಾರೆ. ಈ ಮಧ್ಯೆ ಎಸ್‌ಡಿಪಿಐ ಮುಖಂಡರು ಪೊಲೀಸರ ಮೇಲೆ ಆರೋಪ ಮಾಡಿರುವುದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಲು ಮಾಡಿರುವ ಷಡ್ಯಂತ್ರ. ಕೊಲೆಯಾದವರ ಕುಟುಂಬಸ್ಥರಿಗೆ ಗೊತ್ತಿಲ್ಲದ ಹಣಕಾಸಿನ ಮಾಹಿತಿ ಎಸ್‌ಡಿಪಿಐ ಮುಖಂಡನಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಬೇಕು.

ಈ ಕೊಲೆ ರಾಜ್ಯ ಕಾಂಗ್ರೆಸ್ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೊಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಖುದ್ದು ಗೃಹ ಸಚಿವರೇ ತುಮಕೂರಿಗೆ ಭೇಟಿ ನೀಡಿ ವಿವರ ಪಡೆದು, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಗೃಹ‌ ಸಚಿವರನ್ನು ಭೇಟಿಯಾಗಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಘಟನೆ ನಡೆದ ಕ್ಷಣದಿಂದ ಕುಟುಂಬದ ಜೊತೆ ನಿಂತು ಅವಿರತ ಶ್ರಮ ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಂತ್ರಸ್ತ ಕುಟುಂಬದ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಘಟನೆ ನಡೆದ ಬಳಿಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ರವರು ಕೊಲೆಗೀಡಾದವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ವೇಗವಾಗಿ ಮೃತರ ಡಿಎನ್‌ಎ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ಸರಕಾರದ ಪ್ರಯತ್ನದಿಂದ ವೇಗವಾಗಿ ಮೃತರ ಡಿಎನ್‌ಎ ಪರೀಕ್ಷೆ ನಡೆದು ಶವಗಳು ಕುಟುಂಬಸ್ಥರಿಗೆ ಹಸ್ತಾಂತರವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿರುವಾಗ ಎಸ್‌ಡಿಪಿಐ ಮುಖಂಡರು ಪೊಲೀಸರು ಮತ್ತು ಸರಕಾರದ ಮೇಲೆ ಆರೋಪಗಳ ಮೇಲೆ ಆರೋಪಗಳನ್ನು ಹೊರಿಸುವುದರ ಹಿಂದೆ ದುರುದ್ದೇಶ ಇರುವುದು ಸ್ಪಷ್ಟ. ಲೋಕಸಭಾ ಚುನಾವಣೆ ಸಮಯದಲ್ಲಿ ಈ ಕೊಲೆ‌ ಪ್ರಕರಣವನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ ಮುಖಂಡರು ಮುಸ್ಲಿಂ ಸಮುದಾಯದ ಹಾದಿ‌ ತಪ್ಪಿಸಲು ಪ್ರಯತ್ನ ನಡೆಸುತ್ತಿರುವ ಸಂಶಯ ಮೂಡುತ್ತಿದೆ.

ಇಂತಹ ಪ್ರಕರಣಗಳಲ್ಲಿ ಯಾರೂ ರಾಜಕೀಯ ನಡೆಸಬಾರದು. ಶವಗಳನ್ನು ಮುಂದಿಟ್ಟು ರಾಜಕೀಯ ನಡೆಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಪೊಲೀಸರ ಮೇಲೆ ಸುಳ್ಳು ಆರೋಪ ಹೊರಿಸಿ ಮಾಧ್ಯಮ ಹೇಳಿಕೆ ನೀಡುವ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಹಾಳುಮಾಡುವ ಕೆಲಸವನ್ನು ಯಾವುದೇ ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕರು ಮಾಡಬಾರದು. ಇಂತಹ ಹೇಳಿಕೆಗಳಿಂದ ಪೊಲೀಸರ ಮೇಲೆ ಅಪನಂಬಿಕೆಗಳು ಮೂಡುವುದರಿಂದ ಜನರಿಗೆ ಪೊಲೀಸರ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ಇದರಿಂದ ಅರಾಜಕ ಪರಿಸ್ಥಿತಿ ಎದುರಾಗಬಹುದು. ಈ ಪ್ರಕರಣದಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯನ್ನು ಕೊಲೆಗೀಡಾದವರ ಕುಟುಂಬಸ್ಥರೇ ಶ್ಲಾಘಿಸಿರುವಾಗ ಎಸ್‌ಡಿಪಿಐ ಮುಖಂಡರು ಪೊಲೀಸರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ.

ಇದೊಂದು ಭೀಭತ್ಸ ಕೃತ್ಯ ಆಗಿರುವುದರಿಂದ ಒಟ್ಟು ಸಮಾಜ, ಸಮುದಾಯಗಳು, ಮುಖಂಡರು, ಎಲ್ಲಾ ಪಕ್ಷದ ರಾಜಕಾರಣಿಗಳು ಜೊತೆಗೂಡಿ ಸಮಾಜಘಾತುಕರ ವಿರುದ್ಧ ಹೋರಾಡಬೇಕು.


Spread the love

Exit mobile version