ಎಸ್ಪಿ ನಿಂಬರ್ಗಿ ವರ್ಗಾವಣೆಗೆ ಆಗ್ರಹಿಸಿ ಜಯಮಾಲಾರಿಗೆ ಕಾಂಗ್ರೆಸಿಗರ ಮುತ್ತಿಗೆ; ಡೊಂಟ್ ಕ್ಯಾರ್ ಮಾಡಿದ ಸಚಿವೆ!

Spread the love

ಎಸ್ಪಿ ನಿಂಬರ್ಗಿ ವರ್ಗಾವಣೆಗೆ ಆಗ್ರಹಿಸಿ ಜಯಮಾಲಾರಿಗೆ ಕಾಂಗ್ರೆಸಿಗರ ಮುತ್ತಿಗೆ; ಡೊಂಟ್ ಕ್ಯಾರ್ ಮಾಡಿದ ಸಚಿವೆ!

ಉಡುಪಿ: ಭಾರತ್ ಬಂದ್ ವೇಳೆ ಅನಾವಶ್ಯಕವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರನ್ನು ವರ್ಗಾವಣೆ ಮಾಡದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರನ್ನು ಘೇರಾವ್ ಹಾಕಿದ ಘಟನೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಯೋಜಿಸಿದ ಗಾಂಧಿ 150 ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವೆ ಜಯಮಾಲಾ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವೇಳೆ ರಮೇಶ್ ಕಾಂಚನ್ ಮತ್ತವರ ತಂಡ ಸೇರಿಕೊಂಡು ಸಚಿವರಿಗೆ ಮುತ್ತಿಗೆ ಹಾಕಿ ಭಾರತ್ ಬಂದ್ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶಾಂತಿಯುತವಾಗಿ ಬಂದ್ ಮಾಡುತ್ತಿದ್ದ ವೇಳೆ ಉದ್ದೇಶಪೂರ್ವಕವಾಗಿ ಬಿಜೆಪಿಯವರು ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಜಿಲ್ಲಾ ಎಸ್ಪಿಯವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಲಾಠಿ ಚಾರ್ಜ್ ವೇಳೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದರೂ ಕೂಡ ಸೌಜನ್ಯಕ್ಕಾದರೂ ಸಚಿವರು ಭೇಟಿ ಮಾಡಿಲ್ಲ ಬದಲಾಗಿ ಎಸ್ಪಿಯವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನ ಮಾಡಿದದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಾನು ಘಟನೆಯ ವೇಳೆ ಬೆಂಗಳೂರಿನಲ್ಲಿದ್ದು ಅಲ್ಲಿಂದಲೇ ಸಂಪೂರ್ಣ ಮಾಹಿತಿಯನ್ನು ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಕಾಂಗ್ರೆಸಿನ ಹಿರಿಯ ನಾಯಕರಿಂದ ಪಡೆದುಕೊಂಡಿದ್ದೇನೆ. ಗಣೇಶ ಹಬ್ಬಕ್ಕೆ ಎಸ್ಪಿಯವರ ಮನೆಗೆ ತನ್ನ ಸ್ವಇಚ್ಚೆಯಿಂದ ಹೋಗಿದ್ದು ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಇದರಿಂದ ತೃಪ್ತರಾಗದ ಕಾರ್ಯಕರ್ತರು ಕೂಡಲೇ ಎಸ್ಪಿಯವರನ್ನು ವರ್ಗಾಯಿಸುವಂತೆ ಪಟ್ಟು ಹಿಡಿದರು ಇದರಿಂದ ಕೋಪಗೊಂಡ ಸಚಿವೆ ಜಯಮಾಲಾ ಮಾಧ್ಯಮದವರನ್ನು ಇಟ್ಟುಕೊಂಡು ಮಾಡುವ ನಾಟಕವನ್ನು ನಾನು ಸಹಿಸುವುದಿಲ್ಲ. ನಾನು ಶಾಂತಿಪ್ರಿಯಳು ನನಗೆ ನನ್ನ ಜಿಲ್ಲೆಯಲ್ಲಿ ಶಾಂತಿ ಅಗತ್ಯ ಅದನ್ನು ಬಿಟ್ಟು ಇಂತಹ ವರ್ತನೆಗೆ ನಾನು ಎಂದಿಗೂ ತಲೆಬಾಗಲ್ಲ ಎಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡದ್ದಲ್ಲದೆ ಸಿಟ್ಟಿನಿಂದ ಕಾರಿನತ್ತ ನಡೆದು ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು


Spread the love