ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹಕ್ಕು ಮೊಟಕು: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳವರ ಮೀಸಲಾತಿ, ಮುಂಬಡ್ತಿ ಹಕ್ಕು ಮೊಟಕುಗೊಳಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್ ಮಾತನಾಡಿ ಮೀಸಲಾತಿ ದೇಶದ ನಾಗರಿಕನ ಹಕ್ಕಾಗಿದ್ದು ಇದನ್ನು ಕಿತ್ತುಕೊಳ್ಳುವಂತೆ ಹುನ್ನಾರ ನಡೆಸುತ್ತಿದೆ. ದೇಶದಲ್ಲಿ ಎಸ್ಸಿ ಎಸ್ಟಿ ಮೀಸಲಾತಿಯನ್ನು ತೆಗೆದು ಹಾಕಿದರೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಸರಕಾರ ಸುಪ್ರಿಂ ಕೋರ್ಟಿನ ತೀರ್ಪಿನ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಮೀಸಲಾತಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ,ಕೇಂದ್ರ ಸರಕಾರ ದಿನನಿತ್ಯ ಒಂದಲ್ಲೊಂದು ಕಾನೂನು ತರುತ್ತಿದೆ.ಈ ಕಾನೂನುಗಳು ಜನರಿಗೆ ಉಪಯೋಗವಾಗುವ ಬದಲು ಜನರಿಗೆ ತೊಂದರೆಯನ್ನೇ ಕೊಡುತ್ತಿವೆ. ಪೌರತ್ವ ಕಾಯಿದೆಯನ್ನೇ ತೆಗೆದುಕೊಂಡರೂ ಇದೊಂದು ಸಂವಿಧಾನ ವಿರೋಧಿ ಕಾಯಿದೆಯಾಗಿದೆ. ಸರಕಾರ ಮಂಡಿಸಿದ ಬಜೆಟ್ ನಲ್ಲಿ ಏನಾದರೂ ಜನರಿಗೆ ಅನುಕೂಲ ಸಿಗಬಹುದೇ ಎಂದು ನೋಡಿದರೆ ಅಲ್ಲಿ ಒಂದು ಶೇಖಡಾದಷ್ಟೂ ಜನರಿಗೆ ಉಪಯೋಗ ಇಲ್ಲ.ಹೀಗೆ ಬಡ ಮತ್ತು ಮಧ್ಯಮವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಇರುವ ಅನುಕೂಲಗಳನ್ನು ಒಂದೊಂದಾಗಿ ಕೇಂದ್ರ ಸರಕಾರ ಹಿಂಪಡೆಯುತ್ತಿದೆ.ಇದರ ವಿರುದ್ಧ ಜನರು ದನಿ ಎತ್ತಬೇಕಾದ ಕಾಲ ಬಂದಿದೆ.ಕಾಂಗ್ರೆಸ್ ಪಕ್ಷ ನಿರಂತರವಾಗಿ ಜನರ ಪರ ದನಿ ಎತ್ತುವ ಕೆಲಸ ಮಾಡಲಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ನಾಯಕರಾದ ಕಿಶನ್ ಹೆಗ್ಡೆ ಕೊಳಕೆಬೈಲು, ವೆರೋನಿಕಾ ಕರ್ನೆಲಿಯೊ, ರೋಶನಿ ಒಲಿವೇರಾ, ರಮೇಶ್ ಕಾಂಚನ್, ಯತೀಶ್ ಕರ್ಕೆರಾ, ಮೀನಾಕ್ಷಿ ಮಾಧವ ಬನ್ನಂಜೆ, ಡಾ|ಸುನೀತಾ ಶೆಟ್ಟಿ, ನರಸಿಂಹ ಮೂರ್ತಿ, ಮೇರಿ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.