Home Mangalorean News Kannada News ಎಸ್.ಎಸ್. ಎಲ್. ಸಿ ಮೌಲ್ಯಮಾಪನದಲ್ಲಿ ವ್ಯಾಪಕ ಲೋಪದೋಷ – ಫಾರೂಕ್ ಬಯಾಬೆ

ಎಸ್.ಎಸ್. ಎಲ್. ಸಿ ಮೌಲ್ಯಮಾಪನದಲ್ಲಿ ವ್ಯಾಪಕ ಲೋಪದೋಷ – ಫಾರೂಕ್ ಬಯಾಬೆ

Spread the love

ಎಸ್.ಎಸ್. ಎಲ್. ಸಿ ಮೌಲ್ಯಮಾಪನದಲ್ಲಿ ವ್ಯಾಪಕ ಲೋಪದೋಷ – ಫಾರೂಕ್ ಬಯಾಬೆ

ಮಂಗಳೂರು: ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಗಂಭೀರ ಪ್ರಮಾಣದ ಲೋಪದೋಷಗಳು ಈ ವರ್ಷ ಕಂಡುಬಂದಿದ್ದು, ಈಗಾಗಲೇ ಹಲವು ಪ್ರಕರಣಗಳು ವರದಿಯಾಗಿವೆ. ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಅಂಕ ನೀಡಿರುವಲ್ಲಿ, ಏಣಿಕೆಯಲ್ಲಿ ಮತ್ತು ಮೌಲ್ಯಮಾಪನದಲ್ಲಿ ತಪ್ಪುಗಳು ಕಂಡುಬಂದಿತ್ತು. ಆದರೆ, ಈ ವರ್ಷ ಅತ್ಯಂತ ಕಳವಳ ಪಂಡುವಂತಹ ಪ್ರಮಾಣದಲ್ಲಿ ಲೋಫ ದೋಷಗಳು ಕಂಡುಬಂದಿದ್ದು, ಇದಕ್ಕೆ ರಾಜ್ಯ ಸರಕಾರದ ವೈಫಲ್ಯ ಮೇಲು ನೋಟಕ್ಕೆ ಕಂಡುಬರುತ್ತದ ಎಂದು ಎಸ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಆರೋಪಿಸಿದ್ದಾರೆ

ಅವರು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅತೀ ಹೆಚ್ಚು ಲೋಪದೋಷ ಪ್ರಕರಣಗಳು ಕಂಡುಬಂದಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಎಂಬುದನ್ನು ನಾವು ಗಮನಿಸಬೇಕಾಗಿದೆ. ಸಾಮಾನ್ಯವಾಗಿ ಇವೆರಡು ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮಂಚೂಣಿಯಲ್ಲಿ ಇರುವ ಜಿಲ್ಲೆಗಳು. ಈ ಬಾರಿಯ ಪುನರ್ ಮೌಲ್ಯಮಾಪನ ವರದಿಗಳು ಬಂದ ಅನಂತರ ಉಭಯ ಜಿಲ್ಲೆಗಳಲ್ಲಿ 748 ಪ್ರಕರಣಗಳಲ್ಲಿ ಸರಿಯಾಗಿ ಮೌಲ್ಯಮಾಪನ ಮಾಡದಿರುವ ಪರಿಣಾಮ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಎಷ್ಟೋ ಮಂದಿ ಫೇಲಾದ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹಲವು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇನ್ನೆಷ್ಟೋ ಮಂದಿ ಪುನರ್ ಮೌಲ್ಯಮಾಪನದ ಅನಂತರ ಕೂಡ ನ್ಯಾಯ ದೊರೆತಿಲ್ಲ. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಅದೆಷ್ಟೋ ಶಾಲೆಗಳಲ್ಲಿ ಟಾಪ್ ಮಾರ್ಕ್ ಪಡೆಯಬೇಕಾಗಿದ್ದ ವಿದ್ಯಾರ್ಥಿಗಳಿಗೆ ಅವರು ನಿರೀಕ್ಷಿಸಿದ ಅಂಕ ದೊರೆತ್ತಿಲ್ಲ.

ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ಯಥಾಪ್ರತಿಯನ್ನು ಪಡೆಯಲು ದುಬಾರಿ ಶುಲ್ಕ ತೆರಬೇಕಾಗಿರುವುದರಿಂದ ತುಂಬಾ ಮಂದಿ ಅಂಕ ವಂಚಿತರಾದ ಮತ್ತು ತೇರ್ಗಡೆ ಆಗಬೇಕಾಗಿದ್ದ ವಿದ್ಯಾರ್ಥಿಗಳಿಗೆ ಮರುಏಣಿಕೆ, ಉತ್ತರ ಪತ್ರಿಕೆ ಪ್ರತಿ ಅಥವ ಪುನರ್ ಮೌಲ್ಯಮಾಪನ ಮಾಡಿಸಲು ಸಾಧ್ಯವಾಗಿಲ್ಲ. ಪುನರ್ ಮೌಲ್ಯಮಾಪನ ಮಾಡಿಸುವ ಮುನ್ನ ಉತ್ತರಪತ್ರಿಕೆಯ ಪ್ರತಿಯನ್ನು ಪಡೆಯಬೇಕು ಮತ್ತು ಇವುಗಳ ಒಟ್ಟು ಖರ್ಚು 1,200 ರೂಪಾಯಿಗಿಂತಲೂ ಹೆಚ್ಚಾಗುವುದು. ಕೊರೊನಾ ಮತ್ತು ಇನ್ನಿತರ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಮಂದಿ ವಿದ್ಯಾರ್ಥಿಗಳ ಹೆತ್ತವರು ಇಂತಹ ದುಬಾರಿ ವೆಚ್ಚಕ್ಕೆ ಮುಂದಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅವರ ಸುಂದರ ಕನಸುಗಳು ಭಗ್ನ ಆಗಲಿದೆ. ಅವರು ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆಗಳು ಇವೆ.

ಮೌಲ್ಯಮಾಪಕರು ಮತ್ತು ಸರಕಾರಿ ವ್ಯವಸ್ಥೆಯ ಇಂತಹ ಯಡವಟ್ಟಿನಿಂದಾಗಿಯೇ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಪರೀಕ್ಷಾ ಫಲಿತಾಂಶಕ್ಕೆ ಮುನ್ನ ಫೇಸ್ ಬುಕ್ ಲೈವ್ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ಭರವಸೆಯ ಮಾತುಗಳನ್ನು ಆಡಿದ್ದರು. ಅದೇ ಸಚಿವರು ಇಂತಹ ಗಂಭೀರ ಸ್ವರೂಪದ ಮೌಲ್ಯಮಾಪನ ಲೋಪದೋಷಗಳು ಕಂಡುಬಂದ ನಂತರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಿಷಾದನೀಯ ವಿಚಾರವಾಗಿದೆ.

ಸರಕಾರ ಕೇವಲ ಮಾರ್ಕ್ ರಿಟೊಟಲಿಂಗ್ (ಅಂಕಗಳ ಮರುಏಣಿಕೆ) 150 ರೂಪಾಯಿ ಪಡೆಯುತ್ತದೆ. ಅದೇ ರೀತಿ ಉತ್ತರ ಪತ್ರಿಕೆಯ ಪತ್ರಿ ಪಡೆಯಲು 400 ರೂಪಾಯಿ ಅನಂತರ ಮರುಮೌಲ್ಯಮಾಪನಕ್ಕೆ 800 ರೂಪಾಯಿ ವಿಧಿಸುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ದುಬಾರಿ ಶುಲ್ಕಗಳಾಗಿವೆ.

ರಾಜ್ಯ ಸರಕಾರದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಇನ್ನಾದರು ಎಸ್ ಎಸ್ ಎಲ್ ಸಿ ಮೌಲ್ಯಮಾಪನದಲ್ಲಿ ಆಗಿರುವ ಯಡವಟ್ಟುಗಳ ಬಗ್ಗೆ ವಿವರವಾದ ಮಾಹಿತಿಯನ್ನು ರಾಜ್ಯದ ಜನರ ಮುಂದಿಡಬೇಕಾಗಿದೆ. ಯಾಕಾಗಿ ಇಂತಹ ಗಂಭೀರ ಲೋಪದೋಷಗಳು ಆಗಿವೆ. ಇದಕ್ಕೆ ಸರಕಾರ ಕೈಗೊಂಡಿರುವ ಪರಿಹಾರ ಕ್ರಮಗಳು ಏನು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು.

ರಾಜ್ಯ ಸರಕಾರ ಸಕಾಲಕ್ಕೆ ಶಿಕ್ಷಕರಿಗೆ ವೇತನ ಪಾವತಿ ಮಾಡಿದರುವ ಕಾರಣಕ್ಕೆ ಮೌಲ್ಯಮಾಪನ ಮಾಡಿರುವ ಶಿಕ್ಷಕರು ಇಂತಹ ಕೃತ್ಯಕ್ಕೆ ಮುಂದಾದರೆ. ಅಥವ ದೇಶದಲ್ಲಿ ಇಂದು ಆಡಳಿತ ವೈಫಲ್ಯದಿಂದ ಬೇಸತ್ತಿರುವ ಶಿಕ್ಷಕರು ಇಂತಹ ಕ್ರಮಕ್ಕೆ ಮುಂದಾದರೆ. ಅಥವ, ಸರಕಾರ ಸಾಕಷ್ಟು ಆರ್ಥಿಕ ಸಂಪನ್ಮೂಲ ಇಲ್ಲದಿರುವ ಹಿನ್ನೆಲೆಯಲ್ಲಿ ಮೌಲ್ಯಮಾಪಕರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸದ ಭಾರದ ನೀಡಿತ್ತೆ ಎಂಬಿತ್ಯಾದಿಗಳ ಬಗ್ಗೆ ಕೂಡ ಶಿಕ್ಷಣ ಸಚಿವರು ಬೆಳಕು ಚೆಲ್ಲಬೇಕಾಗಿದೆ.

ನಾವು ಒಟ್ಟಾರೆ ಆಗಿರುವ ಮೌಲ್ಯಮಾಪನದ ಲೋಪದೋಷ ಪ್ರಕರಣದ ಸಮಗ್ರ ತನಿಖೆಯನ್ನು ಸಮರ್ಥ ಏಜೆನ್ಸಿ ಮೂಲಕ ಸರಕಾರ ಮಾಡಬೇಕು ಮತ್ತು ಮಕ್ಕಳ ಭವಿಷ್ಯದೊಂದಿದೆ ಚೆಲ್ಲಾಟ ಆಡುವುದು ಇಲ್ಲಿಗೆ ನಿಲ್ಲಬೇಕು. ಪ್ರೌಢಶಾಲೆ ಪಬ್ಲಿಕ್ ಪರೀಕ್ಷೆ ಎಂಬುದು ಪ್ರತಿಯೊಬ್ಬನ ಜೀವನದಲ್ಲಿ ಒಂದು ಅತ್ಯಂತ ಮಹತ್ವದ ವಿಚಾರ ಆಗಿರುತ್ತದೆ. ಈ ಪರೀಕ್ಷೆಯ ಫಲಿತಾಂಶ ಆತನ ಭವಿಷ್ಯವನ್ನು ನಿರ್ಧರಿಸುತ್ತದೆ. ಇಂತಹ ಮಹತ್ವದ ಪರೀಕ್ಷೆಯ ಮೌಲ್ಯಮಾಪನ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಹೊರತು ತಾತ್ಸಾರವಾಗಿ ನೋಡುವುದು ಯಾವುದೇ ಪ್ರಜಾಪ್ರಭುತ್ವವಾದಿ ಸರಕಾರಕ್ಕೆ ಶ್ರೇಯಸ್ಕರವಲ್ಲ.

ಬೇಡಿಕೆಗಳುಃ

  • ಲೋಕಾಯುಕ್ತ ಅಥವ ಎಸಿಬಿ ಅಥವ ಇನ್ಯಾವುದೇ ಸಮರ್ಥ ಸಂಸ್ಥೆ ಮೂಲಕ ಸಮಗ್ರ ತನಿಖೆ ನಡೆಸಬೇಕು.
  • ತಪ್ಪಿತಸ್ಥ ಅಧಿಕಾರಿಗಳನ್ನು ಮತ್ತು ಮೌಲ್ಯಮಾಪಕರನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕು.
  • ಲೋಪ ದೋಷ ಆಗಿರುವ ಸಮಗ್ರ ಮಾಹಿತಿಯನ್ನು ಸರಕಾರ ಬಹಿರಂಗ ಮಾಡಬೇಕು.
  • ಮೌಲ್ಯಮಾಪನದಿಂದ ನೊಂದವರಿಗೆ ಸಾಂತ್ವನ ಹೇಳಬೇಕು ಮತ್ತು ಅಗತ್ಯವಿದ್ದರೆ ಅವರಿಗೆ ಕೌನ್ಸೆಲಿಂಗ್ ಸೌಲಭ್ಯ ಒದಗಿಸಬೇಕು.
  • ಮೌಲ್ಯಮಾಪನದ ಲೋಪ ದೋಷಗಳನ್ನು ನಿವಾರಿಸಲು ನೀತಿ ನಿಯಮನಗಳನ್ನು ಕಠಿಣಗೊಳಿಸಬೇಕು.
    ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರದಿಂದ ಚುನಾಯಿತರಾದ ಶಾಸಕರು ಈ ಬಗ್ಗೆ ಸದನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ನ್ಯಾಯ ಒದಗಿಸಬೇಕು.
  • ಎನ್ಎಸ್ ಯುಐ ದ.ಕ. ಜಿಲ್ಲಾ ಕಾರ್ಯದರ್ಶಿ ಸವಾದ್ ಸುಳ್ಯ, ಎನ್ಎಸ್ ಯುಐ ಆರ್.ಟಿ.ಐ. ರಾಷ್ಟ್ರೀಯ ಕೋಡಿನೇಟರ್ ಅನ್ವೀತ್ ಕಟೀಲ್, ಮಂಗಳೂರು ನಗರ ಅಧ್ಯಕ್ಷ ಶೌನಕ್ ರೈ, ಬಂಟ್ವಾಳ ಅಧ್ಯಕ್ಷ ವಿನಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ಬಂಟ್ವಾಳ ಕಾರ್ಯದರ್ಶಿ ಶಫೀಕ್ ಮತ್ತಿತರರು ಉಪಸ್ಥಿತರಿದ್ದರು.

Spread the love

Exit mobile version