Home Mangalorean News Kannada News ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಗದೀಶ್ ಭೇಟಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಗದೀಶ್ ಭೇಟಿ

Spread the love

ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಗದೀಶ್ ಭೇಟಿ

ಉಡುಪಿ: ಕಾಪು ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದ್ದು, ಸೋಮವಾರ ಬೆಳಿಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗಧೀಶ್ ಹೆಜಮಾಡಿಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿಯ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.

ವಿದ್ಯಾರ್ಥಿನಿಯು ಜೂ.25ರ ಎಸೆಸೆಲ್ಸಿ ಕನ್ನಡ ಮತ್ತು ಜೂ.27ರಂದು ನಡೆದ ಗಣಿತ ಪರೀಕ್ಷೆಯನ್ನು ಹೆಜಮಾಡಿ ಕೇಂದ್ರದಲ್ಲಿ ಬರೆದಿದ್ದರು. ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ವರದಿಯು ಜೂ.27ರಂದು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈಕೆಯನ್ನು ಕೂಡ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂ.28ರಂದು ಈ ಪರೀಕ್ಷೆಯ ವರದಿ ಬಂದಿದ್ದು, ಇದರಲ್ಲಿ ಪಾಸಿಟಿವ್ ಎಂಬುದು ದೃಢಪಟ್ಟಿದೆ. ಇದರಿಂದ ಈಕೆ ಜೂ.29ರಂದು ನಡೆಯುವ ವಿಜ್ಞಾನ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.

ಆ ವಿದ್ಯಾರ್ಥಿಯ ದೂರವಾಣಿ ಸಂಖ್ಯೆ ಪಡೆದ ಜಿಲ್ಲಾಧಿಕಾರಿ ಆಕೆಯೊಂದಿಗೆ ಮಾತನಾಡಿ, ಆಕೆಗೆ ಧೈರ್ಯ ತುಂಬಿದರು. ಮತ್ತು ಮುಂದಿನ ಪರೀಕ್ಷೆಯ ಬಗ್ಗೆ ಚಿಂತಿತಳಾಗದೆ ಮುಂದೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಭರವಸೆ ನೀಡಿದರು.

ಈ ಸಂಧರ್ಭ ಮಾಧ್ಯಮದೊಂದಿಗೆ ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್19 ಪಾಸಿಟಿವ್ ಪೀಡಿತ ವಿದ್ಯಾರ್ಥಿಯಿಂದಾಗಿ ಬೇರೆ ಯಾವ ವಿದ್ಯಾರ್ಥಿಗಳು ಹೆದರುವ ಆಗತ್ಯವಿಲ್ಲ. ಸದ್ಯ ಆ ವಿದ್ಯಾರ್ಥಿಯನ್ನು ಕಾರ್ಕಳದ ಆಸ್ಪ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಹೆದರಿಕೆ ಬೇಡ. ಇಡೀ ಶಿಕ್ಷಣ ಇಲಾಖಾಧಿಕಾರಿಗಳ ತಂಡ ಇಲ್ಲಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಆಕೆ ಪರೀಕ್ಷೆ ಬರೆದ ಪರೀಕ್ಷಾ ಕೊಠಡಿಯನ್ನು ಬಿಟ್ಟು ಬೇರೆ ಕೊಠಡಿಯನ್ನು ಉಪಯೋಗಿಸಲಾಗಿದೆ. ಪರೀಕ್ಷಾ ಕೊಠಡಿಯಿಂದ ಕೋವಿಡ್ ಬಂದಿಲ್ಲ. ಅವರ ಕುಟುಂಬದವರಿಗೆ ಬಂದ ಪರಿಣಾಮ ವಿದ್ಯಾಥಿನಿಗೆ ಪಸರಿಸಿದೆ. ಮಗು ಚೆನ್ನಾಗಿದ್ದಾಳೆ. ಅವಳೊಂದಿಗೆ ನಾನು ಈಗ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಯಾವ ಕಾರಣಕ್ಕೂ ಆತಂಕ ಬೇಡ. ಆಸ್ಪತ್ರೆಯಲ್ಲಿ ಮಗು ಮುಂದಿನ ಪರೀಕ್ಷೆಗಾಗಿ ಓದುತ್ತಿದ್ದಾಳೆ. ಯಾವುದೇ ತೊಂದರೆ ಇಲ್ಲ. ಪರೀಕೆ ಬೆರದ ಕೊಠಡಿಯ ಮಕ್ಕಳಿಗೆ ಹರಡುವ ಬಗ್ಗೆ ಆತಂಕ ಬೇಡ. ರೋಗ ಹರಡಲು ಆರು ಗಂಟೆಯ ಸಮಯ ಬೇಕಿದೆ. ಅವರು ಒಟ್ಟಾಗಿ ಒಂದೆರಡು ಗಂಟೆ ಮಾತ್ರ ಇದ್ದುದರಿಂದ ಮತ್ತು ಒಬ್ಬರಿಗೊಬ್ಬರು ದೂರ ಸಾಮಾಜಿಕ ಅಂತರ ಕಾಯ್ದು ಕೊಂಡಿದ್ದರಿಂದ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜೆ, ಅಧಿಕಾರಿಗಳಾದ ಎಸ್ ಎಂ ನಾಗೇಶ್, ಹೆಜಮಾಡಿ ಗ್ರಾಮ ಪಂಚಾಯಾತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ ಮತ್ತು ಪಡುಬಿದ್ರಿ ಪೊಲೀಸ್ ಆಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version