Home Mangalorean News Kannada News ಎಸ್.ಐ.ಓ .ದಿಂದ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019 ಬಿಡುಗಡೆ

ಎಸ್.ಐ.ಓ .ದಿಂದ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019 ಬಿಡುಗಡೆ

Spread the love

ಎಸ್.ಐ.ಓ .ದಿಂದ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019 ಬಿಡುಗಡೆ

ಮಂಗಳೂರು: ದೇಶಾದ್ಯಂತ ಇಂದು ವಿದ್ಯಾರ್ಥಿ ಸಮುದಾಯ ಮತ್ತು ಯುವಕರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಲಕ್ಷ್ಯ ಭಾವದಿಂದ ಪರಿಹಾರವಿಲ್ಲದೆ ಮುಂದಿನ ಪೀಳಿಗೆಯ ಭವಿಷ್ಯವು ಸಂದಿಗ್ಧತೆಯಿಂದ ಕೂಡಿದೆ. ಈ ನಿಟ್ಟಿನಲ್ಲಿ ಎಂದಿನಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಈ ದೇಶದ ಭವಿಷ್ಯದ ತೀರ್ಮಾನ ಮಾಡದೆ ವಿದ್ಯಾಥಿ –ಯುವಕರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಆ ಮೂಲಕ ರಾಜಕೀಯ ಪಕ್ಷಗಳು ಈ ಸಮಸ್ಯೆಗಳ ಕುರಿತು ಸಮಗ್ರ ಪರಿಹಾರ ನೀಡುವಲ್ಲಿ ಕಾರ್ಯ ಪ್ರವೃತರಾಗಬೇಕಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ ಆಗ್ರಹಿಸಿದ್ದಾರೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ವತಿಯಿಂದ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಸಲುವಾಗಿ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019ಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಎಸ್.ಐ.ಓ ಕಳೆದ ಹಲವಾರು ವರ್ಷಗಳಿಂದ ಒಂದು ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಪ್ರತೀ ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆಯನ್ನು ತರುತ್ತಿದೆ. ಈ ಬಾರಿಯೂ ಪ್ರತೀ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ, ನಮ್ಮ ಅಹವಾಲನ್ನು ತಿಳಿಸಿದ್ದೇವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುದೃಢಗೊಳಿಸುವ ದಿಸೆಯಲ್ಲಿ ಹಾಗೂ ವಿದ್ಯಾರ್ಥಿ ಯುವಕರನ್ನು ದೇಶದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ದೇಶದ, ರಾಜ್ಯದ ಮತ್ತು ಜಿಲ್ಲೆಯ ಹಲವಾರು ನೈಜ ವಿಚಾರಗಳಾದ ಶಿಕ್ಷಣ, ಉದ್ಯೋಗ, ಪರಿಸರ, ಮಾನವ ಹಕ್ಕು ಹಾಗೂ ಸಾಮಾಜಿಕ ನ್ಯಾಯವನ್ನೊಳಗೊಂಡು ಸುಮಾರು ಐವತ್ತರಷ್ಟು ಬೇಡಿಕೆ ಹಾಗೂ ಶಿಫಾರಸ್ಸುಗಳನ್ನು ಚುನಾವಣಾ ಎಸ್.ಐ.ಓ. ನ ವಿದ್ಯಾರ್ಥಿ ಪ್ರಣಾಳಿಕೆಯು ಹೊಂದಿದೆ.

ಈ ನಿಟ್ಟಿನಲ್ಲಿ ಶಿಕ್ಷಣದ ವಿಭಾಗವಾಗಿ ಹಲವು ಶಿಕ್ಷಣ ಆಯೋಗಗಳ ಶಿಫಾರಸ್ಸಿನಂತೆ ಶಿಕ್ಷಣದ ಮೇಲಿನ ವೆಚ್ಚ ಪ್ರಮಾಣವನ್ನು ಜಿಡಿಪಿ ಯ ಶೇ.8%ಕ್ಕೆ ಏರಿಸಬೇಕೆಂಬುದು ನಮ್ಮ ಪ್ರಾಥಮಿಕ ಬೇಡಿಕೆಯಾಗಿದೆ. ಆರ್.ಟಿ.ಇ ಕಾಯ್ದೆಯನ್ನು ಹುಟ್ಟಿನಿಂದ 18 ವಯಸ್ಸಿನವರೆಗೆ ವಿಸ್ತರಿಸಬೇಕು. ಎಲ್ಲ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಸುಪ್ರೀಮ್ ಕೋರ್ಟ್ ನ ಮಾರ್ಗಸೂಚಿಯಂತೆ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಬೇಕು. ದ.ಕ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಸಮೀಕ್ಷೆ ನಡೆಯಬೇಕಾಗಿರುವುದು ಅತ್ಯವಶ್ಯವಾಗಿದೆ. ಕಡಿಮೆ ಪದವೀಧರರ ಸಂಖ್ಯೆ, ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವವರ ಸಂಖ್ಯೆ ಮತ್ತು ಅದೇ ರೀತಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ, ಅದರ ಆಧಾರದಲ್ಲಿ ಅಗತ್ಯವುಳ್ಳ ಕಾರ್ಯ ನೀತಿಯನ್ನು ರೂಪಿಸಿ, ಬಳಿಕ ಸರ್ಕಾರವು ನಿಧಿಯನ್ನು ನೀಡಬೇಕು. ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಕಾನೂನು ಕಾಲೇಜು(ಲಾ ಕಾಲೇಜು) ಸ್ಥಾಪಿಸಬೇಕು. ಉದ್ಯೋಗವು ಪ್ರಸ್ತುವ ಯುವಜನರ ಪ್ರಮುಖ ಚರ್ಚಾ ವಿಚಾರವಾಗಿದ್ದು, ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕೌಶಲ್ಯ ಭಾರತ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುವವರಿಗೆ ಪ್ರಮಾಣ ಪತ್ರ, ಸ್ಟೈಪೆಂಡ್ ಮತ್ತು 100% ಉದ್ಯೋಗ ಖಾತ್ರಿಯನ್ನು ನೀಡಬೇಕು. ಎಲ್ಲಾ ಸರಕಾರಿ ಮತ್ತು ಸಾರ್ವಜನಿಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಮುಂದಿನ ಆರು ತಿಂಗಳೊಳಗಾಗಿ ಸರಕಾರದ ಖಾಲಿ ಹುದ್ದೆಗಳು ಭರ್ತಿಯಾಗುವುದನ್ನು ಖಾತ್ರಿ ಪಡಿಸಬೇಕೆಂದು ಈ ಪ್ರಣಾಳಿಕೆಯ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಗಮನ ಯುವಜನರತ್ತ ಸೆಳೆಯಲು ಯತ್ನಿಸಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಂದ ವಂಚಿಸುವ ಕೆಲಸಗಳು ಜನರ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿದೆ. ಮರ್ದಿತ ವರ್ಗಗಳು ಮುಖ್ಯಸ್ಥರದಲ್ಲಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಣಾಳಿಕೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಜಸ್ಟಿಸ್ ರಂಗನಾಥ್ ಮಿಶ್ರಾ ಸಮಿತಿಯ ವರದಿಯಂತೆ ಧಾರ್ಮಿಕ ಅಲ್ಪಸಂಖ್ಯಾತ ರಿಗೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ 10% ಶೇ. ಮೀಸಲಾತಿಯನ್ನು ನೀಡಬೇಕು. ಸಾಚಾರ್ ಸಮಿತಿ ಮತ್ತು ಸಾಚಾರೋತ್ತರ ವಿಕಸನ ಸಮಿತಿಗಳ ವರದಿಯಂತೆ ಮೀಸಲಾತಿಯನ್ನು ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟ ವಿಭಾಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಬೇಕು. ಮೀಸಲಾತಿಯನ್ನು ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳಿಗೂ ವಿಸ್ತರಿಸಬೇಕು.

ಈ ಎಲ್ಲಾ ಬೇಡಿಕೆಯೊಂದಿಗೆ ಪರಿಸರದ ರಕ್ಷಣೆ ಕೂಡಾ ನಮ್ಮ ಪ್ರಧಾನ ಆದ್ಯತೆಯಾಗಬೇಕಾದ ಅವಶ್ಯಕತೆಯಿದೆ. ಪ್ರಸ್ತುತ ಪರಿಸರದ ರಕ್ಷಣೆ ಮುಖ್ಯ ಭೂಮಿಕೆಯಲ್ಲಿ ಚರ್ಚಿಸಲ್ಪಡುತ್ತಿರುವ ವಿಚಾರವಾಗಿದೆ. ಅದನ್ನು ಕೂಡ ಈ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ಕೊಟ್ಟು ಚರ್ಚಿಸಲಾಗಿದೆ. ನಗರಗಳಲ್ಲಿ ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯ ವಿಂಗಡನೆಗಾಗಿ ನಗರ-ಸ್ಥಳೀಯಾಡಳಿತ ವ್ಯಾಪ್ತಿಗೊಳಪಡುವ ಪ್ರತೀ ಮನೆಗಳಿಗೆ ಜೈವಿಕ ಚೀಲಗಳನ್ನು ವಿತರಿಸಬೇಕು. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ವಾಯು ಗುಣಮಟ್ಟವನ್ನು ಕಾಪಾಡುವ ಅನೇಕ ಕೇಂದ್ರಗಳನ್ನು ಸ್ಥಾಪಿಸಬೇಕು. ನೀರಿನ ಕೊರತೆ/ಅಭಾವವನ್ನು ನೀಗಿಸಲು ಕರಾವಳಿ ಜಲಾಶಯ, ಉಪ ಮೇಲ್ಮೈ ಅಣೆಕಟ್ಟು ಹೀಗೆ ಜಲ ಸಂರಕ್ಷಣೆಗಾಗಿ ಅನೇಕ ಪರ್ಯಾಯ ಮಾರ್ಗಗಳನ್ನು ಜಾರಿಗೊಳಿಸಬೇಕೆಂದು ಎಸ್.ಐ.ಓ ತನ್ನ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ-2019 ರಲ್ಲಿ ಆಗ್ರಹಿಸಿದ್ದೇವೆ ಎಂದು ಯಾಸೀನ್ ಕೋಡಿಬೆಂಗ್ರೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಸರಕಾರಿ ಲಾ ಕಾಲೇಜು(ಕಾನೂನು ಕಾಲೇಜು)ಗಳನ್ನು ಸ್ಥಾಪಿಸಬೇಕು. ಮಂಗಳೂರು ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್(ಯುನಿವರ್ಸಿಟಿ ಕಾಲೇಜು)ಗಳನ್ನು ಜಿಲ್ಲೆಯ ಇತರ ಶೈಕ್ಷಣಿಕವಾಗಿ ಹಿಂದುಳಿದಿರುವ ತಾಲೂಕುಗಳಲ್ಲಿ ಸ್ಥಾಪಿಸಬೇಕು. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಯು ಕಳವಳಕಾರಿಯಾಗಿದ್ದು, ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಿಂದ ತಡೆಗಟ್ಟುವಿಕೆಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಶಿಕ್ಷಣದ ವಿಭಾಗವನ್ನು ಬೆಂಗಳೂರಿನ ನಿಮ್ಹಾನ್ಸ್ ಮಾದರಿಯಲ್ಲಿ ಪ್ರಾರಂಭಿಸಬೇಕು. ಇದರ ಮುಖಾಂತರ ಎಲ್ಲಾ ಕಾಲೇಜುಗಳಲ್ಲಿ ಈ ಕೌನ್ಸಿಲಿಂಗ್ ಸೆಂಟರ್‍ನ ಸಂಪರ್ಕ ಲಭ್ಯವಿರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ನೂತನವಾಗಿ ಮಂಜೂರಾದ ಕಡಬ ತಾಲೂಕಿನಲ್ಲಿ ವಿದ್ಯಾರ್ಥಿ ನಿಲಯದ ಸೌಲಭ್ಯವಿರುವ ಮಹಿಳಾ ಸರಕಾರಿ ಪದವಿ ಕಾಲೇಜು ಸ್ಥಾಪಿಸಬೇಕು. ವಿದ್ಯಾರ್ಥಿನಿಯರ ಮೇಲಾಗುವ ಶೋಷಣೆ ತಡೆಗಟ್ಟಲು ಪ್ರಸಕ್ತ ಇರುವ ವ್ಯವಸ್ಥೆಯ ಪುನರ್ಪರಿಶೀಲಿಸಿ ಯುಜಿಸಿಯ ನಿಯಾಮವಳಿಯಂತೆ ಎಲ್ಲಾ ಕಾಲೇಜುಗಳಲ್ಲಿ ಗ್ರೀವೆನ್ಸ್ ಸೆಲ್ ಸ್ಥಾಪನೆಯಾಗುವಂತೆ ಕುಲಪತಿಗಳು ಖಾತ್ರಿಪಡಿಸುವುದು. ಹಾಗೂ ತಪ್ಪಿತಸ್ಥರು ಯಾರೇ ಆದರೂ ಬಾಹ್ಯ ಒತ್ತಡರಹಿತ ವಿಚಾರಣೆಗೊಳಪಡುವಂತೆ ಅಂತಹ ಪ್ರಕರಣದ ಮೇಲ್ವಿಚಾರಣೆಯನ್ನು ನಡೆಸಲು ವಿಶ್ವವಿದ್ಯಾ ನಿಲಯದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು ಎಂದು ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ನ ದ.ಕ. ಜಿಲ್ಲಾಧ್ಯಕ್ಷೆ ಆಯಿಷಾ ತಬಸ್ಸುಮ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿವಿ ಯ ಸಂಶೋಧನಾ ವಿದ್ಯಾರ್ಥಿ ಸಂತೋಷ್, ಎಸ್ ಐ ಓ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸಫ್ವಾನ್ ಸತ್ತಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

Exit mobile version