ಎಸ್.ಡಿ.ಪಿ.ಐ ವತಿಯಿಂದ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ”ರಾಷ್ಟ್ರೀಯ ಅಭಿಯಾನ
ಮಂಗಳೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಆಗಸ್ಟ್ 1 ರಿಂದ 25ರ ವರೆಗೆ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ಶೀರ್ಷಿಕೆ ಅಡಿಯಲ್ಲಿ ರಾಷ್ಟ್ರೀಯ ಅಭಿಯಾನ ನಡೆಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎ. ಸಯೀದ್ ಸಾಬ್‍ರವರು ಕರೆ ನೀಡಿರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಈ ಅಭಿಯಾನವನ್ನು ಯಶಸ್ವಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಂತಿಪ್ರಿಯ ನಾಗರೀಕರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಇಲ್ಯಾಸ್ ಮುಹಮ್ಮದ್ ತುಂಬೆಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಥಾ ಕಥಿತ ಗೋ ರಕ್ಷಕರು ದೇಶದಲ್ಲಿ ನಿರ್ಮಿಸಿರುವ ಅರಾಜಕತೆಯ ಪರಿಸ್ಥಿತಿಯನ್ನು ಪ್ರತಿರೋಧಿಸಲು ಮತ್ತು ಭಯಭೀತ ಜನರಲ್ಲಿ ಜಾಗೃತಿ ಮೂಡಿಸಿ ಜನರನ್ನು ಸಂಘಟಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ. ದೇಶದಲ್ಲಿ ನೂರಾರು ಮುಸ್ಲಿಂ ಮತ್ತು ದಲಿತ ಕುಟುಂಬಗಳು ಈ ಕೋಮುವಾದಿ ಗೂಂಡಾ ಪಡೆಗಳು ಸೃಷ್ಠಿಸಿದ ಭಯೋತ್ಪಾದನೆಯಿಂದ ನಾಶವಾಗಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಬೆಂಬಲಿತ ಗೋ ರಕ್ಷಕರು ನಡೆಸಿರುವ ಗುಂಪು ಹಿಂಸಾ ಹತ್ಯೆಯಿಂದಾಗಿ 39 ಮಂದಿ ಅಮಾಯಕ ಜೀವ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡು ದಯನೀಯ ಸ್ಥಿತಿಗೆ ತಲುಪಿದ್ದಾರೆ. ದೇಶದಾದ್ಯಂತ ಗುಂಪು ಹಿಂಸಾ ಹತ್ಯೆಯು ನಿರಂತರವಾಗಿ ವರದಿಯಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಈ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಕಿಂಚಿತ್ತು ಗಣನೆಗೆ ತೆಗೆದುಕೊಳ್ಳದಿರುವುದು ಜನತೆಯಲ್ಲಿ ಆಶ್ಚರ್ಯ ಉಂಟುಮಾಡುತ್ತಿದೆ.
ಸಂಘಪರಿವಾರದ ತರಬೇತಿ ಮತ್ತು ಪ್ರೇರಣೆಯನ್ನು ಹೊಂದಿದ ಪರಿಣಿತ ಆಕ್ರಮಣಕಾರರಿಗೆ ಪಶು ವ್ಯಾಪರ, ಮಾರಟ, ಸಾಗಾಟ ಮತ್ತು ಮಾಂಸ ಸೇವನೆ ಮಾಡುವವರ ಮೇಲೆ ಸರಿಯಾದ ಶಿಕ್ಷೆ ನೀಡಬೇಕೆಂಬ ಆದೇಶದ ಮೇರೆಗೆ ಅವರು ಕೇಸರಿ ರಾಜಕೀಯದ ಬೆಂಬಲ ಮತ್ತು ರಕ್ಷಣೆಯೊಂದಿಗೆ ಬಡ ಅಮಾಯಕ ಮುಸ್ಲಿಮರ ಮೇಲೆ ಗುಂಪು ಹಿಂಸಾ ಹತ್ಯೆಯನ್ನು ಮತ್ತು ದರೋಡೆಯನ್ನು ನಡೆಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಗುರಿ ಪಶು ವ್ಯಾಪರಸ್ಥರು ಅಥವಾ ಬೀಫ್ ಸಾಗಾಟಗಾರರು ಅಲ್ಲದೆ ಕೇವಲ ಮುಸ್ಲಿಮರು ಮಾತ್ರವೇ ಆಗಿರುವುದು ಕಂಡು ಬಂದಿದೆ. ಪ್ರಧಾನ ಮಂತ್ರಿಯವರ ಹಗುರ ಮತ್ತು ಜಾರಿಕೆಯ ಹೇಳಿಕೆಯು ಅವರಿಗೆ ಈ ದೇಶದ ಮುಸ್ಲಿಂ ಸಮಾಜದ ಹಿತವನ್ನು ಕಾಪಾಡುವ ಬಗ್ಗೆಯಾಗಲಿ ಮತ್ತು ಭಯೋತ್ಪಾದಕ ಗೋ ರಕ್ಷಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಉತ್ಸಾಹ ಇಲ್ಲದಿರುವುದು ಕಂಡುಬರುತ್ತದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಸಂಚರಿಸಿ ಗುಂಪು ಹಿಂಸಾ ಹತ್ಯೆಯ ವಿರುದ್ದ ಜನರನ್ನು ಸಂಘಟಿಸುವ ಮತ್ತು ಪ್ರತಿರೋಧಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಇದರ ಅಂಗವಾಗಿ ರಾಷ್ಟ್ರದಾದ್ಯಂತ ಸ್ನೆಹ ಕೂಟ, ವಿಚಾರ ಸಂಕಿರಣ, ರ್ಯಾಲಿ, ಬೃಹತ್ ಸಾರ್ವಜನಿಕ ಸಭೆಗಳು, ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಾಧೀಶರಿಗೆ ಆನ್‍ಲೈನ್ ಫಿರ್ಯಾದಿ ಸಲ್ಲಿಕೆ, ಪೋಸ್ಟರ್ ಅಭಿಯಾನ, ಕರಪತ್ರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ದೇಶದಾದ್ಯಂತ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 34 ಬೃಹತ್ ಸಾರ್ವಜನಿಕ ಸಭೆಗಳು, 250ಕ್ಕೂ ಅಧಿಕ ಕಾರ್ನರ್ ಮೀಟ್‍ಗಳು ಮತ್ತು 10 ವಿಚಾರ ಸಂಕಿರಣಗಳನ್ನು ನಡೆಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಅಭಿಯಾನದ ಪ್ರಯುಕ್ತ 8 ಸಾರ್ವಜನಿಕ ಸಭೆಗಳು, 100ಕ್ಕೂ ಅಧಿಕ ಕಾರ್ನರ್ ಮೀಟ್‍ಗಳು, 2 ವಿಚಾರ ಸಂಕಿರಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆಸಲಿದ್ದೇವೆ.
“ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೊಧಿಸೋಣ” ಎಂಬ ರಾಷ್ಟ್ರೀಯ ಅಭಿಯಾನವು ಆಗಸ್ಟ್ 1ರಂದು ರಾಜಸ್ಥಾನದ ಜೈಪುರದಲ್ಲಿ ಉದ್ಘಾಟನೆಗೊಳ್ಳಲಿದ್ದು ಅಭಿಯಾನದ ಕೊನೆಯ ದಿನವಾದ ಆಗಸ್ಟ್ 25ರಂದು ಭಾರತದ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ಅವರ ನೋವಿನಲ್ಲಿ ನಾವು ಕೂಡ ಭಾಗಿದಾರರು ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ದೇಶದ ವಿವಿಧ ಪ್ರದೇಶಗಳ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ “ಮನೆಯಿಂದ ಹೊರಗೆ ಬನ್ನಿ” ಎಂಬ ಫಲಕವನ್ನು ಪ್ರದರ್ಶಿಸಿ ಕರಾಳತೆಯ ಸಂಕೇತವಾದ ಕಪ್ಪುಪಟ್ಟಿಯನ್ನು ತೋಳುಗಳಿಗೆ ಕಟ್ಟುವ ಮೂಲಕ ದೇಶದ ಗಮನವನ್ನು ಸೆಳೆಯುವುದರೊಂದಿಗೆ ಈ ಅಭಿಯಾನವು ಸಮಾರೋಪಗೊಳ್ಳಲಿರುವುದು.
ಸುದ್ದಿಗೋಷ್ಟಿಯಲ್ಲಿ ಅಲ್ಫೋನ್ಸೋ ಫ್ರಾಂಕೋ (ರಾಜ್ಯ ಕಾರ್ಯದರ್ಶಿ ಎಸ್.ಡಿ.ಪಿ.ಐ), ಹನೀಫ್‍ಖಾನ್ ಕೊಡಾಜೆ (ಜಿಲ್ಲಾಧ್ಯಕ್ಷರು ಎಸ್.ಡಿ.ಪಿ.ಐ ದ.ಕ), ಅಥಾವುಲ್ಲಾ.ಎ.ಎಮ್ (ಪ್ರಧಾನ ಕಾರ್ಯದರ್ಶಿ ಎಸ್.ಡಿ.ಪಿ.ಐ ದ.ಕ) ಉಪಸ್ಥಿತರಿದ್ದರು.