ಎ.ಕೆ. ಕುಕ್ಕಿಲರವರ ‘ಎಣ್ಣೆ ಬತ್ತಿದ ಲಾಟೀನು’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2017ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಬರಹಗಾರ, ಪತ್ರಕರ್ತ ಎ.ಕೆ. ಕುಕ್ಕಿಲರವರ ‘ಎಣ್ಣೆ ಬತ್ತಿದ ಲಾಟೀನು’ (ಪ್ರವಾಸ ಕಥನ) ಕೃತಿ ಆಯ್ಕೆಯಾಗಿದೆ.
ಸುಮಾರು 20 ವರ್ಷಗಳ ಹಿಂದೆ ‘ಸನ್ಮಾರ್ಗ’ ಕನ್ನಡ ವಾರಪತ್ರಿಕೆಯ ಸಂಪಾದಕೀಯ ಬಳಗಕ್ಕೆ ಸೇರ್ಪಡೆಗೊಂಡು, ಕಳೆದ 10 ವರ್ಷಗಳಿಂದ ‘ಸನ್ಮಾರ್ಗ’ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಎ.ಕೆ. ಕುಕ್ಕಿಲರವರು ಕಥೆಗಾರ, ಸೃಜನಶೀಲ ಬರಹಗಾರ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡವರು. ‘ದಾಯಿರ (ಕಥಾ ಸಂಕಲನ), ‘ಜಾಗತೀಕರಣ ಮತ್ತು ಸಂಸ್ಕøತಿ’ (ವೈಚಾರಿಕ ಕೃತಿ), ‘ಚಾಟಿಯೇಟು’ (ಸನ್ಮಾರ್ಗ ಸಂಪಾದಕೀಯ ಸಂಗ್ರಹ), ‘ಮದ್ಯಪಾನ: ಪರ, ವಿರೋಧ ಮತ್ತು ನಿಜ’ (ವೈಚಾರಿಕ ಕೃತಿ) ಮತ್ತು ‘ಸರಸ ಸಲ್ಲಾಪ’ (ಲಿಲಿತ ಪ್ರಬಂಧ) ಎ.ಕೆ. ಕುಕ್ಕಿಲರ ಇತರ ಪ್ರಕಟಿತ ಕೃತಿಗಳು. ಇವರ ‘ದಾಯಿರ ’ ಕೃತಿಯು 2003ನೇ ಸಾಲಿನ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿಯು ರೂ. 10000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ನವೆಂಬರ್ 22ರಂದು ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪತ್ರಕರ್ತರಾದ ಬಿ.ಎಂ. ಹನೀಫ್ ಮತ್ತು ಬಿ.ಎಂ. ಬಶೀರ್ ಹಾಗೂ ಬರಹಗಾರ ಅಬ್ದುಲ್ ರಹಿಮಾನ್ ಕುತ್ತೆತ್ತೂರು ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.