Home Mangalorean News Kannada News ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ...

ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಬ್ರಹ್ಮ ಕಲಶೋತ್ಸವ

Spread the love

ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಬ್ರಹ್ಮ ಕಲಶೋತ್ಸವ

ತುಳು ಕನ್ನಡಿಗರು ಸಮಾಜ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರದಲ್ಲಿ ಮಾಡಿದ ಸಾಧನೆ ಅಪಾರ. ಅದೇ ರೀತಿ ಧಾರ್ಮಿಕ ಕ್ಷೇತ್ರದಲ್ಲಿಯೂ ಈ ಮಾಯಾನಗರಿಯಲ್ಲಿ ನಮ್ಮವರ ಕೊಡುಗೆ ತುಂಬಾ ಇದೆ.ಸುಮಾರು ಒಂದೂವರೆ ಶತಮಾನದ ಹಿಂದೆ ಕರ್ನಾಟಕ ಕರಾವಳಿಯಿಂದ ಉದ್ಯೋಗವನ್ನರಸಿ ಮುಂಬಯಿಗಾಗಮಿಸಿದ ನಮ್ಮ ಹಿರಿಯರು ಈ ನಗರದ ಉದ್ದಗಲಕ್ಕೂ ಚದುರಿಹೋಗಿದ್ದರು. ಎಲ್ಲರೂ ತುಳನಾಡಿನಿಂದಲೇ ಬಂದವರಾಗಿದ್ದರೂ ಕೂಡ ಪರಸ್ಪರ ಸಂಪರ್ಕವಿಲ್ಲದೇ ಇದ್ದ ಕಾರಣದಿಂದಾಗಿ ಯಾವುದೇ ಸಂದರ್ಭಗಳಲ್ಲಿಯೂ ಎಲ್ಲರೂ ಒಂದೆಡೆಯಲ್ಲಿ ಸೇರುತ್ತಿರಲಿಲ್ಲಾ. ಹೀಗಿರುವಾಗ ಈ ರೀತಿ ಹಲವಾರು ಕಡೆ ಹಂಚಿಹೋಗಿದ್ದ ನಮ್ಮವರೆಲ್ಲರನ್ನೂ ಸಂಂಘಟಿಸುವ ಅನಿವಾರ್ಯತೆಯನ್ನು ನಮ್ಮ ಹಿರಿಯರು ಅಂದಿನ ದಿನಗಳಲ್ಲಿ ಕಂಡುಕೊಂಡರು. ಪ್ರಾರಂಭದಲ್ಲಿ ಅವರೆಲ್ಲರನ್ನೂ ಅಲ್ಲಲ್ಲಿ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ, ಅದರ ಮೂಲಕ ಅವರನ್ನೆಲ್ಲಾ ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮುಖೇನವಾಗಿ ಮುಂಬಯಿ ನಗರ ಹಾಗೂ ಉಪನಗರದಾದ್ಯಂತ ಹಲವಾರು ಭಜನಾ ಮಂಡಳಿಗಳು ಹುಟ್ಟಿಕೊಂಡವು. ಅನೇಕ ಭಜನಾ ಮಂಡಳಿಗಳಿಗೆ ನಮ್ಮವರ ಹೋಟೇಲುಗಳು ಹಾಗೂ ನಮ್ಮವರು ಉದ್ಯೋಗದಲ್ಲಿದ್ದ ಕಛೇರಿಗಳೇ ಆಶ್ರಯತಾಣವಾಗಿದ್ದವು. ಆ ಬಳಿಕ ಹಲವಾರು ಕಡೆ ಆವೇಶ ದರ್ಶನದ ಕೇಂದ್ರಗಳು, ಯಕ್ಷಗಾನ ಮಂಡಳಿಗಳು, ಮಠ ಮಂದಿರಗಳು , ದೈವಸ್ಥಾನ , ದೇವಸ್ಥಾನಗಳು, ಗರಡಿಗಳು, ಪೂಜಾ ಸಮಿತಿಗಳು ಮಂತಾದ ಧಾರ್ಮಿಕ ಕೇಂದ್ರಗಳು ನಮ್ಮವರಿಂದ ಸ್ಥಾಪನೆಗೊಂಡವು. ಮುಂದೇ ಇಂತಹ ಧಾರ್ಮಿಕ ಸಂಸ್ಥೆಗಳೇ ಅನೇಕ ಜಾತೀಯ ಸಂಘಗಳು, ತುಳು ಕನ್ನಡ ಸಂಘಗಳು , ನಾಟಕ ಸಂಸ್ಥೆಗಳ ಸ್ಥಾಪನೆಗೆ ಸ್ಪೂರ್ತಿಯಾದವು.ಇಂತಹ ಧಾರ್ಮಿಕ ಕೇಂದ್ರಗಳು ನಗರದಲ್ಲಿ ಇಂದೂ ಸಕ್ರಿಯವಾಗಿದ್ದುಕೊಂಡು ನಮ್ಮವರನ್ನು ಸಂಘಟಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿಕೊಂಡಿರುತ್ತವೆ. ಈಗ ಇದೇ ಸಾಲಿನಲ್ಲಿ ತುಳು ಕನ್ನಡಿಗರ ಮುಂದಾಳತ್ವದ ಇನ್ನೊಂದು ಶಿವ ದೇಗುಲವು ಬೊರಿವಲಿ ಪಶ್ಚಿಮದಲ್ಲಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.

ಮುಂಬಯಿ ಮಹಾನಗರದಲ್ಲಿನ ತುಳು ಕನ್ನಡಿಗರ ಕಣ್ಮಣಿ, ಜನಪ್ರಿಯ ಸಂಸದ ಶ್ರೀ ಗೋಪಾಲ ಸಿ ಶೆಟ್ಟಿ ಯವರು ತನ್ನದೇ ಪರಿಸರದ ಬೊರಿವಲಿ ಪಶ್ಚಿಮದಲ್ಲಿ ತೀರಾ ಅಜೀರ್ಣಾವಸ್ಥೆಯಲ್ಲಿರುವ ಮಂಡಪೇಶ್ವರ ಗುಹೆಗಳಿರುವ ಜಾಗದಲ್ಲಿ ಒಂದು ಒಳ್ಳೆಯ ಶಿವಾಲಯವನ್ನು ಸ್ಥಾಪಿಸುವ ಕನಸನ್ನು ಕಂಡು ಆ ಮುಖೇನವಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ. ಈ ಬಗ್ಗೆ ನಮ್ಮ ತುಳುನಾಡಿನ ಸಂಪ್ರದಾಯದಂತೆ, ಪ್ರಶ್ನೆ ಚಿಂತನೆಯಲ್ಲಿ ವಿಮರ್ಶಿಸಿ ಅದರಲ್ಲಿ ಕಂಡು ಬಂದಂತೆ, ಮಂಡಪೇಶ್ವರ ಗುಹೆಗಳೊಳಗೆ ಭಗ್ನಗೊಂಡ ವಿಗ್ರಹಗಳನ್ನು ಸುವ್ಯವಸ್ಥಿತಗೊಳಿಸಿ, ಅದರಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಪರಿವಾರ ಶಕ್ತಿಗಳಾದ ನಂದಿ, ಮಹಾಗಣಪತಿ ಹಾಗೂ ನಾಗದೇವರಿಂದೆೊಡಗೂಡಿದ ಶಿವಾಲಯವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದು ,ಅದರ ಬಹುತೇಕ ಕೆಲಸಕಾರ್ಯಗಳು ಈಗಾಗಲೇ ಪೂರ್ಣಗೊಂಡಿರುತ್ತದೆ. ಈ ಗುಹೆಗಳ ಜೀರ್ಣೋದ್ಧಾರದ ಬಗ್ಗೆ ಗೋಪಾಲ ಶೆಟ್ಟಿಯವರು ಬಹಳ ದಿನಗಳಿಂದಲೂ ಸರಕಾರದ ಗಮನ ಸೆಳೆಯುತ್ತಾ ಬಂದಿದ್ದು ಅನೇಕ ಪತ್ರ ವ್ಯವಹಾರಗಳನ್ನು ನಡೆಸಿರುತ್ತಾರೆ. ಶಿವದೇಗುಲವನ್ನು ನಿರ್ಮಿಸುವ ಶ್ರೀ ಗೋಪಾಲ ಶೆಟ್ಟಿಯವರ ಮನದ ಇಂಗಿತವನ್ನರಿತ ಉತ್ತರ ಮುಂಬಯಿ ಬಿ.ಜೆ.ಪಿ.ಯ ಉಪಾಧ್ಯಕ್ಷರು ಹಾಗೂ ಪ್ರಸಿದ್ದ ಹೋಟೇಲು ಉದ್ಯಮಿ, ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಅಸಾಯಕರಿಗೆ ಆಶಾಕಿರಣವಾಗಿ,ಅನ್ನದಾತರಾದ ಸಮಾಜ ರತ್ನ ಎರ್ಮಾಳ್ ಹರೀಶ್ ಶೆಟ್ಟಿಯವರು ಈ ದೇವತಾ ಕಾರ್ಯವನ್ನು ತನ್ನ ಕೈಗೆತ್ತಿಕೊಂಡರು. ಸಂಸದರ ಸಲಹೆಯಂತೆ ಮಂಡಪೇಶ್ವರ ಗುಹೆಯ ಜೀರ್ಣೋದ್ಧಾರ ಮತ್ತು ಸೌಂದರ್ಯೀಕರಣಕ್ಕೆ ಇವರು ಕಂಕಣಬದ್ಧರಾದರು. ಗುಹೆಯಲ್ಲಿ ಭಗ್ನಗೊಂಡ ಎಲ್ಲಾ ವಿಗ್ರಹಗಳನ್ನು ಸುವ್ಯವಸ್ಥಿತಗೊಳಿಸಿ, ನೂತನವಾಗಿ ಶಿವಲಿಂಗ, ನಂದಿ, ಗಣಪತಿ, ನಾಗದೇವರು ಹಾಗೂ ಕೂರ್ಮ(ಆಮೆ) ಮೊದಲಾದ ಮೂರ್ತಿಗಳನ್ನು. ಪ್ರತಿಷ್ಠಾಪನೆಗೊಳಿಸಿ ಇದೇ ಬರುವ ಎಪ್ರಿಲ್ ತಿಂಗಳ 25ಹಾಗೂ 26 ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶೋತ್ಸವವನ್ನು ನೆರವೇರಿಸಿ ಕ್ಷೇತ್ರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜೀರ್ಣೋದ್ದಾರವಾಗಿ ಪುನರ್ ನಿರ್ಮಾಣಗೊಂಡ ಈ ದೇವಸ್ಥಾನವನ್ನು ಶ್ರೀ ಪಾಂಡವೇಶ್ವರ ದೇವಸ್ಥಾನ ಎಂದು ಕರೆಯಲಾಗುವುದು (ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಈ ಸ್ಥಳದಲ್ಲಿ ಪಂಚಪಾಂಡವರು ತಮ್ಮ ವನವಾಸದ ಕಾಲದಲ್ಲಿ ಶಿವನನ್ನು ಆರಾಧಿಸಿದ್ದರಂತೆ). ಎಲ್ಲಾ ವಿಗ್ರಹಗಳನ್ನು ನಿರ್ಮಿಸಲು ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಖ್ಯಾತ ಶಿಲ್ಪಿಯಾದ ಶ್ರೀ ಸದಾಶಿವ ಶೆಣೈಯವರನ್ನು ನಿಯೋಜಿಸಲಾಗಿದೆ. ಶಿವಲಿಂಗಕ್ಕೆ ಸುಮಾರು 18 Kg ತೂಕದ ಬೆಳ್ಳಿಯ ಹೊದಿಕೆಯನ್ನು ತೊಡಿಸುವ ಯೋಜನೆಯಿದೆ

ಮುಂಬಯಿಯ ಬೊರಿವಲಿ ಪಶ್ಚಿಮದ ಬಳಿ ಇರುವ ಮಂಡಪೇಶ್ವರ ಗುಹೆಗಳು ಸುಮಾರು 8 ನೇ ಶತಮಾನದಲ್ಲಿ ನಿರ್ಮಾಣಗೊಂಡವು ಎಂದು ಅಂದಾಜಿಸಲಾಗಿದೆ. ಇದು ಬೃಹತ್ ಬಂಡೆಯನ್ನು ಕೊರೆದು ನಿರ್ಮಿಸಿದ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿತವಾದ ಕ್ಷೇತ್ರವಾಗಿದೆ. ಈ ಗುಹೆಗಳು ಕೆಲವು ಸಮಯ ಬೌದ್ಧ ವಿಹಾರಗಳಾಗಿದ್ದ ಉಲ್ಲೇಖಗಳಿವೆ. ಪ್ರಸ್ತುತ ಈ ಗುಹೆಗಳು ಮುಂಬಯಿಯ ಪಶ್ಚಿಮ ಉಪನಗರಗಳ ಜನಪ್ರಿಯ ಪ್ರವಾಸಿ ತಾಣವಾಗಿದೆ.

ಸಾಂಪ್ರದಾಯಿಕವಾಗಿ ಸನಾತನ ಹಿಂದೂ ಧರ್ಮದಲ್ಲಿ ಭಗ್ನಗೊಂಡ, ತುಂಡಾದ ಅಂಗವೈಕಲ್ಯವನ್ನು ಹೊಂದಿದ ಅಥವಾ ಮುರಿದ ವಿಗ್ರಹಗಳನ್ನು ಪೂಜಿಸಬಾರದು ಎಂಬ ಸ್ಪಷ್ಟ ನಂಬಿಕೆ ಹಾಗೂ ನಿಯಮಗಳಿವೆ. ಬೊರಿವಲಿಯ ಮಂಡಪೇಶ್ವರ ಗುಹೆಯಂತೆ, ದೇಶಾದ್ಯಂತವಿರುವ ಅನೇಕ ಗುಹೆಗಳಲ್ಲಿ , ಪಾಳು ಬಿದ್ದಿರುವ ದೇವಸ್ಥಾನ, ದೈವಸ್ಥಾನಗಳಲ್ಲಿ ವಿವಿಧ ದೇವತೆಗಳ -ದೈವಗಳ ಛಿದ್ರ ಛಿದ್ರವಾದ ವಿಗ್ರಹಗಳು ಇಂದಿಗೂ ಹಾಗೆಯೇ ಇವೆ. ಇದರ ಬಗ್ಗೆ ಜನಜಾಗೃತಿಯನ್ನು ಮೂಡಿಸಿ, ಅವುಗಳ ಜಾಗದಲ್ಲಿ ಹೊಸ ವಿಗ್ರಹಗಳನ್ನು ನಿರ್ಮಿಸಿ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆಗಳಿವೆ. ಇಂತವುಗಳಲ್ಲಿ ಬೊರಿವಲಿಯ ಪುರಾತನ ಮಂಡಪೇಶ್ವರ ಗುಹೆಯೊಳಗಿರುವ ಶಿವ ದೇವಾಲಯದ ಸ್ಥಿತಿಯೂ ಇದೇ ಆಗಿದೆ. ಶಿಥಿಲಾವಸ್ಥೆ ಮತ್ತು ಭಗ್ನಗೊಂಡ ಪ್ರತಿಮೆಗಳನ್ನು ಪುನರ್ ನಿರ್ಮಾಣಗೊಳಿಸಿ ಪ್ರತಿಷ್ಠಾಪಿಸುವ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮತ್ತು ಹಿಂದೂ ಜನರ ಭಾವನೆ ಹಾಗೂ ನಂಬಿಕೆಗಳಿಗೆ ಒತ್ತನ್ನು ನೀಡಿ, ಜನಮಾನಸದ ಹೃದಯ ಸಾಮ್ರಾಟರಾದ ಉತ್ತರ ಮುಂಬಯಿಯ ಸಂಸದರಾದ ಗೋಪಾಲ್ ಶೆಟ್ಟಿ ಅವರು ಸಂಬಂಧಪಟ್ಟ ಸರಕಾರದ ಉನ್ನತಾಧಿಕಾರಿಗಳಿಗೆ ಈಗಾಗಲೇ ಪತ್ರಗಳನ್ನು ಬರೆದು ಛಿದ್ರವಾದ ವಿಗ್ರಹಗಳನ್ನು ಸರಿಪಡಿಸಿ ಶಿವಲಿಂಗವನ್ನು ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸುತ್ತಾ ಬಂದಿರುತ್ತಾರೆ. ಆದರೆ ಸರಕಾರಕ್ಕೆ ಅದನ್ನು ಪೂರೈಸಲು ಇನ್ನೂ ಸಮಯ ಬಂದಿಲ್ಲ ಎಂದು ಕಾಣುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಸದ ಶ್ರೀ ಗೋಪಾಲ ಶೆಟ್ಟಿಯವರ ತುಳು-ಕನ್ನಡಿಗ ಅಭಿಮಾನಿಗಳ ಬಳಗದ ಸಂಸ್ಥಾಪಕರೂ ಹಾಗೂ ಅಧ್ಯಕ್ಷರೂ ಆದ ಸಮಾಜ ರತ್ನ ಎರ್ಮಾಳ್ ಹರೀಶ್ ಶೆಟ್ಟಿಯವರು ಈಗ ಕ್ರೀಯಾಶೀಲರಾಗಿದ್ದಾರೆ.

ಈ ಗುಹೆಯಲ್ಲಿರುವ ಪುರಾತನ ಶಿವ ದೇವಾಲಯದಲ್ಲಿ, ಸಂಸದ ರತ್ನ ಗೋಪಾಲ ಶೆಟ್ಟಿ ಯವರ ನೇತೃತ್ವದಲ್ಲಿ ತ್ರಿಪುರಾರಿ ಪೂರ್ಣಿಮೆ ಮತ್ತು ಮಹಾ-ಶಿವರಾತ್ರಿಯಂದು ಅದ್ಧೂರಿಯಾಗಿ ಪೂಜೆಯನ್ನು ನೆರವೇರಿಸಲು ತೀರ್ಮಾನಿಸಲಾಗಿದೆ. ಈ ಬಾರಿಯ ಮಹಾ-ಶಿವರಾತ್ರಿಯ ಸಂದರ್ಭದಲ್ಲಿ ಮಂಡಪೇಶ್ವರ ಗುಹೆಯಲ್ಲಿರುವ ಶಿವ ದೇವಾಲಯದಲ್ಲಿ ಸಂಸದ ಗೋಪಾಲ ಶೆಟ್ಟಿ ಅವರಿಂದ ಬೆಳ್ಳಿಯ ಶಿವಲಿಂಗವನ್ನಿಟ್ಟು ಮೂರು ದಿನಗಳ ಉತ್ಸವ ನಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ.ಮುಂದಿನ ದಿನಗಳಲ್ಲಿ ಈ ದೇವಾಲಯವು ಪೂರ್ಣ ಪ್ರಮಾಣದಲ್ಲಿ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಯಾದರೆ ಮುಂಬಯಿಯ ಪಶ್ಚಿಮ ಉಪನಗರ ವಾಸಿ ಹಿಂದೂ ಬಾಂಧವರ ಶ್ರದ್ಧಾಕೇಂದ್ರವಾಗಿ ಹಲವಾರು ಧಾರ್ಮಿಕ ಚಟುವಟಿಕೆಗಳ ಕ್ಷೇತ್ರವಾಗಲಿದೆ.

ಬೊರಿವಲಿ ಮಂಡಪೇಶ್ವರ ಗುಹೆಯಲ್ಲಿ ದಕ್ಷಿಣ ಭಾರತದ ಸಂಪ್ರದಾಯದ ಪ್ರಕಾರವಾಗಿ ನೂತನವಾಗಿ ಲೋಕಾರ್ಪಣೆಗೊಳಿಸಲಿರುವ ಶ್ರೀ ಪಾಂಡೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಹಾಗೂ ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ಹಿಂದೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಸಂಸದ ಶ್ರೀ ಗೋಪಾಲ ಶೆಟ್ಟಿಯವರ ತುಳು-ಕನ್ನಡಿಗ ಅಭಿಮಾನಿಗಳ ಬಳಗದ ಸಂಸ್ಥಾಪಕರೂ ಹಾಗೂ ಅಧ್ಯಕ್ಷರೂ ಆದ ಸಮಾಜ ರತ್ನ ಎರ್ಮಾಳ್ ಹರೀಶ್ ಶೆಟ್ಟಿಯವರು ಎಲ್ಲರನ್ನೂ ವಿನಂತಿಸಿರುತ್ತಾರೆ

ಸಂಸದ ರತ್ನ ಗೋಪಾಲ್ ಸಿ. ಶೆಟ್ಟಿ

ಮುಂಬಯಿ ಮಹಾನಗರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಎಂದೂ ಸೋಲನ್ನರಿಯದೆ ಎಲ್ಲರ ಮನಸ್ಸನ್ನು ಗೆದ್ದು ಇತಿಹಾಸ ನಿರ್ಮಿಸಿದ ತುಳು – ಕನ್ನಡಿಗ ರಾಜಕಾರಿಣಿ ಸಮಾಜ ಸೇವಕ, ಸಂಸದ ರತ್ನ ಗೋಪಾಲ್ ಸಿ. ಶೆಟ್ಟಿಯವರು.ಪ್ರತಿಷ್ಠಿತ ಬಂಟಮನೆತನದಲ್ಲಿ ಜನ್ಮತಳೆದ ಇವರು ಬಾಲ್ಯದಿಂದಲೇ ಬಡತನವೇನೆಂಬುದನ್ನು ಸ್ವತಃ ಅನುಭವಿಸಿ, ತಿಳಿದುಕೊಂಡವರು. ಸಾರ್ವಜನಿಕ ಜೀವನದಲ್ಲಿ ತಳಮಟ್ಟದಿಂದ ಹಂತ ಹಂತವಾಗಿ ಮೇಲೇರಿ,ನಗರ ಸೇವಕರಾಗಿ, ಶಾಸಕರಾಗಿ ಹಾಗೂ ಸಂಸದರಾಗಿ ಜನಪ್ರಿಯ ಜನನಾಯಕರಾಗಿ ಹೊರ ಹೊಮ್ಮಿದವರು.ಆದರೆ ರಾಜಕೀಯ ವಲಯದಲ್ಲಿ ಯಾಚನೆಯ ಸ್ವಭಾವ ಗೋಪಾಲ ಶೆಟ್ಟಿಯವರದ್ದಲ್ಲಾ. ತನಗೆ ಪಕ್ಷದಲ್ಲಿ ಒಂದು ಹುದ್ದೆ ಬೇಕೆಂದು, ಚುಣಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಬೇಕೆಂದು ಯಾರಲ್ಲಿಯೂ ಅಂಗಲಾಚಿದವರಲ್ಲಾ. ಪಕ್ಷದಲ್ಲಿ ದೊರಕಿದ ಅವಕಾಶವನ್ನು, ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಸಿ, ನ್ಯಾಯವನ್ನು ಒದಗಿಸಿ ಎಲ್ಲರ ಗಮನ ಸೆಳೆದವರು ಗೋಪಾಲಣ್ಣನವರು. ಜನರ ಯಾವುದೇ ರೀತಿಯ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ತನ್ನ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುತ್ತಾ ಬಂದ ಇವರು.ಜನರಿಗೆ ಬಂದೊದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾರೊಂದಿಗೆ ರಾಜಿ ಮಾಡಿಕೊಳ್ಳದ ನಿಷ್ಟುರವಾದಿಗಳು.ಲೋಕಸಭೆಯಲ್ಲಿ ಸಂಸದರಾಗಿ ಜನರ ಹಲವಾರು ಸಮಸ್ಯೆಗಳಿಗೆ ಸರಕಾರದ ಗಮನ ಸೆಳೆದು ಅದಕ್ಕೆ ಶಾಶ್ವತವಾದ ಪರಿಹಾರವನ್ನು ಒದಗಿಸಿದವರು. ಇವರ ಕಾರ್ಯವ್ಯಾಪ್ತಿಯ ಕ್ಷೇತ್ರದಲ್ಲಿ ಸರಕಾರವು ಸಾರ್ವಜನಿಕರ ಹಿತಾಸಕ್ತಿಗೆ ಮೀಸಲಿರಿಸಿದ ಭೂಮಿಯಲ್ಲಿ ಒಂದು ಇಂಚಿನಷ್ಟೂ ಜಾಗವನ್ನೂ ಯಾರಿಗೂ ಕಬಳಿಸಲು ಬಿಟ್ಟುಕೊಡದೇ, ಅವುಗಳಲ್ಲಿ ಹಲವಾರು ಉದ್ಯಾನ (ಗಾರ್ಡನ್), ವ್ಯಾಯಾಮಶಾಲೆ, ಕ್ರೀಡಾಂಗಣ,ಆಟದ ಮೈದಾನ ಈಜುಕೊಳ, ನೀರಿನ ಕಾರಂಜಿ ಗಳನ್ನು ನಿರ್ಮಿಸಿ, ಪರಿಸರಕ್ಕೆ ಸೌಂದರ್ಯವನ್ನು ಹಾಗೂ ಸಾರ್ವಜನಿಕರಿಗೆ ಅನುಕೂಲತೆಗಳನ್ನು ಒದಗಿಸಿದ ಕೀರ್ತಿ ಇವರದ್ದು. ರಾಜಕೀಯ,ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುದರೊಂದಿಗೆ ಧಾರ್ಮಿಕ ಕ್ಷೇತ್ರಕ್ಕೂ ಮಹತ್ವವನ್ನು ನೀಡುತ್ತಿರುವ ಇವರು ತನ್ನ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸಮಾಜ ರತ್ನ ಎರ್ಮಾಳ್ ಹರೀಶ್ ಶೆಟ್ಟಿಯವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರ್ಮಾಳ್ ಅಂಬೋಡಿಕಲದವರು.

ಪ್ರಸ್ತುತ, ಉತ್ತರ ಮುಂಬಯಿ ಬಿ.ಜೆ.ಪಿ.ಯ ಉಪಾಧ್ಯಕ್ಷರಾಗಿ, ಪ್ರತಿಷ್ಠಿತ ಹೋಟೇಲ್ ಉದ್ಯಮಿಯಾಗಿ , ಸಮಾಜ ಸೇವಕರಾಗಿ ಗುರುತಿಸಿಕೊಂಡವರು. ನೋಡಲು ಸದಾ ಗಂಭೀರವಾಗಿರುವ ಇವರ ಹೃದಯವು ಅಶಕ್ತರನ್ನು ಅಸಹಾಯಕರನ್ನು ಕಂಡಾಗ ಕರಗಿ ನೀರಾಗುತ್ತದೆ. ಯಾವುದೇ ರೀತಿಯ ಸಹಾಯವನ್ನು ಯಾಚಿಸಿ ಬಂದವರಿಗೆ ತ್ವರಿತವಾಗಿ ಸ್ಪಂದಿಸುವವರು ಹರೀಶಣ್ಣನವರು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಅಸಹಾಯಕರಿಗೆ ಆಶಾಕಿರಣವಾಗಿ, ಅನ್ನದಾತರಾಗಿದ್ದು ಮಾತ್ರವಲ್ಲದೆ ಆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಅನೇಕರನ್ನು ಸಂಸದರಾಗಿದ್ದ ಗೋಪಾಲ್ ಸಿ. ಶೆಟ್ಟಿಯವರ ಮಾರ್ಗದರ್ಶನದಂತೆ ವಿಶೇಷ ಬಸ್ಸಿನಲ್ಲಿ ಹಲವಾರು ಬಾರಿ ತವರೂರಿಗೆ ಕಳುಹಿಸಿ ಸಹಕರಿಸಿರುತ್ತಾರೆ. ಕಳೆದ ಬಾರಿ ಬೊರಿವಲಿಯಲ್ಲಿ ಆಯೋಜನೆಗೊಂಡ ಶ್ರೀನಿವಾಸ ಕಲ್ಯಾಣೋತ್ಸವದ ಯಶಸ್ಸು ಸಂಪೂರ್ಣವಾಗಿ ಎರ್ಮಾಳ್ ಹರೀಶಣ್ಣನಿಗೆ ಸಲ್ಲುತ್ತದೆ. ಇವರು ಯಾವುದೇ ರೀತಿಯ ಪ್ರಚಾರವನ್ನು ಬಯಸದೇ, ವೇದಿಕೆಯ ಆಕಾಂಕ್ಷಿಯಾಗಿರದೆ ಜನತಾ ಸೇವೆಯೇ ಜನಾರ್ಧನನ ಸೇವೆ ಎಂದು ತ್ರಿಕರಣ ಪೂರ್ವಕವಾಗಿ ಜನಸೇವೆಯನ್ನು ಮಾಡಿಕೊಂಡು ಬರುತ್ತಿರುವವರು ಸಮಾಜ ರತ್ನ ಎರ್ಮಾಳ್ ಹರೀಶ್ ಶೆಟ್ಟಿಯವರು.


Spread the love

Exit mobile version