ಎ.26ರಂದು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Spread the love

ಎ.26ರಂದು ಕೇಂದ್ರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ಕೇಂದ್ರ ಸರಕಾರ ಇಂಧನ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಎ.26ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಯ ಮಿನಿ ವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ, ಬಳಿಕ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ರೋಜಿ ಎಂ. ಜಾನ್ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕೆಪಿಸಿಸಿಯ ಪದಾಧಿಕಾರಿಗಳು, ಜಿಲ್ಲಾ ಮುಖಂಡರು ಮೊದಲಾದವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ ಹನ್ನೊಂದು ವರ್ಷದಿಂದ ಜನ ವಿರೋಧಿ ನೀತಿಗಳ ಮೂಲಕ ಆಡಳಿತ ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿಮೆಯಿದ್ದರೂ, ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿದೆ. ಗ್ಯಾಸ್ ಬೆಲೆಯನ್ನೂ ಏಕಾಏಕಿ 50 ರೂ. ಏರಿಕೆ ಮಾಡಲಾಗಿದೆ. ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದ ಜನರು ಹೈರಾಣಾಗಿದ್ದಾರೆ. ರಾಜ್ಯ ಸರಕಾರದ ಐದು ಗ್ಯಾರಂಟಿಯ ಸಹಾಯಧನವನ್ನು ಬೆಲೆ ಏರಿಕೆ ಮೂಲಕ ಕೇಂದ್ರ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಜಾತಿ ಗಣತಿಯಿಂದ ಹಿಂದುಳಿದ ವರ್ಗಗಳಿಗೆ ಪ್ರಯೋಜನವಾಗಲಿದ್ದು, ಏನಾದರೂ ವ್ಯತ್ಯಾಸಗಳು ಆಗಿದ್ದರೆ ಅದನ್ನು ರಾಜ್ಯ ಸರಕಾರ ಸಡಿಪಡಿಸಲಿದೆ ಎಂದರು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಡಿಸಿಎಂ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳಿಗೆ ಹಾನಿ ಮಾಡಿದೆ. ಕಳೆದ ಅನೇಕ ವರ್ಷಗಳಿಂದ ಇದೇ ರೀತಿಯ ಕೃತ್ಯ ಎಸಗುತ್ತಿದೆ. ಇದು ಹೇಡಿತನದ ಕೆಲಸವಾಗಿದ್ದು, ಜಿಲ್ಲಾ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದರು.

ಮುಖಂಡರಾದ ಎಂ. ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಶುಭೋದಯ ಆಳ್ವ, ಶಾಹುಲ್ ಹಮೀದ್, ಟಿ.ಕೆ. ಸುಧೀರ್, ನೀರಜ್‌ಪಾಲ್, ಸುಹಾನ್ ಆಳ್ವ, ಪ್ರೇಮ್ ಬಳ್ಳಾಲ್‌ಬಾಗ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments